ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಕೇಂದ್ರ ಸಮಿತಿ ಹಾಸನ, ರಾಜ್ಯ ಘಟಕ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಎಪ್ರಿಲ್ 27ರ ಬೆಳಿಗ್ಗೆ ಮುಂಬಯಿಯಲ್ಲಿ ಜರುಗಲಿದೆ.
ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಲವು ಮಹತ್ವದ ಕೃತಿಗಳು ಜನಾರ್ಪಣೆಗೊಳ್ಳಲಿದ್ದು, ಕುವೆಂಪು ವಿವಿ ಇತಿಹಾಸ ವಿಭಾಗದ ಡಾ. ಹಸೀನಾ ಎಚ್.ಕೆ ಮತ್ತು ಕೊಪ್ಪಳದ ಹಿರಿಯ ಸಾಹಿತಿ, ವಿಮರ್ಶಕ, ಶಿಕ್ಷಕರಾದ ರಾಮಣ್ಣ ಅಲ್ಮರ್ಸಿಕೇರಿಯವರ ಸಂಪಾದನೆಯಲ್ಲಿ ಪ್ರಕಟಗೊಂಡ ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರ ಬದುಕು-ಬರಹ ಕುರಿತ `ಬೊಗಸೆಯೊಳಗಿನ ದರ್ದ್’ ಮತ್ತು ‘ಪ್ಯಾರಿ ಪದ್ಯ’ ಸಂಕಲನದ ಕೊಂಕಣಿ, ದೇವನಾಗರಿ ಲಿಪಿ ಮತ್ತು ರೋಮನ್ ಭಾಷೆಗಳ ತ್ರಿಭಾಷಾ ಸಂಕಲನ `ಪ್ಯಾರಿ ಪದಂ’ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯಿತ್ರಿ ಫ್ಲಾವಿಯಾ ಆಲ್ಬಕರ್ಕ್ ಅವರ ಅನುವಾದಿತ ಸಂಕಲನ, ಜೊತೆಗೆ ವಿಶ್ವೇಶ್ವರ ಎನ್.ಮೇಟಿಹಳ್ಳಿಯವರ ಹಳ್ಳಿಯ ಎಂಬ ಹಳ್ಳಿ, ತೋಳನೂರು ಒಂದು ಸಂಸ್ಕೃತಿಕ ಅಧ್ಯಯನ, ಕವಯಿತ್ರಿ ಶಿವಲೀಲಾ ಶಂಕರ್ ಅವರ `ಬೇಲಿಯಾಚಿನ ಪಿಸುಮಾತು’ ಕವನ ಸಂಕಲನಗಳನ್ನು ಖ್ಯಾತ ಪತ್ರಕರ್ತ, ವಿಮರ್ಶಕ ಶ್ರೀನಿವಾಸ್ ಜೋಕಟ್ಟಿಯವರು ಜನಾರ್ಪಣೆಗೊಳಿಸುವರು.
ಖ್ಯಾತ ಸಾಹಿತಿ, ವೈದ್ಯೆ ಡಾ. ಎಚ್.ಎಸ್. ಅನುಪಮಾ ಅವರು ಸಮ್ಮೇಳನ ಉದ್ಘಾಟಿಸುವರು. ಡಾ. ಪಿ. ನಾರಾಯಣ ದಿವಾಕರ್, ನಾಗರಾಜ್ ದೊಡ್ಡಮನಿ, ವಾಸು ಸಮುದ್ರವಳ್ಳಿ, ದೇಸು ಆಲೂರ್ ಮುಂತಾದವರು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಜಿ.ಎನ್. ಉಪಾಧ್ಯರಿಗೆ ಗೌರವ ಸಮರ್ಪಿಸುವರು. ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಜರುಗಲಿದೆ ಎಂದು ಅಧ್ಯಕ್ಷ ಕೊಟ್ರೇಶ್ ಉಪ್ಪಾರ ತಿಳಿಸಿದ್ದಾರೆ.