ಬೆಂಗಳೂರು:- ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ ಎಂದು ಹೇಳುವ ಮೂಲಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ. ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ. ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು.
ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ. 5-10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು ಅಟ್ಟಾಡಿಸಿ, ಕಾಂಗ್ರೆಸ್ಸಿನಿಂದ ಹೊರಕ್ಕೆ ಓಡಿಸುತ್ತಿದ್ದರು ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಸುಡುವ ಮನೆ ಎಂದವರು, ಕಾಂಗ್ರೆಸ್ಸಿನ ಮೊದಲ ಕ್ಯಾಬಿನೆಟ್‍ನಿಂದ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದವರು ಬಾಬಾ ಸಾಹೇಬ ಅಂಬೇಡ್ಕರರು. ಅಂಬೇಡ್ಕರರ ತತ್ವಗಳ ವಿರೋಧಿ, ಅವರನ್ನು ಜೀವಿತಾವಧಿಯಲ್ಲಿ ಅವಮಾನಿಸಿದ್ದ, ಚುನಾವಣೆಗಳಲ್ಲಿ ಸೋಲಿಸಿದ್ದ, ಅವರು ಗೆದ್ದ ಸ್ಥಳವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಕಾಂಗ್ರೆಸ್ ಪಕ್ಷವು ಇವತ್ತು ವೋಟ್‌ಬ್ಯಾಂಕ್‌ಗಾಗಿ ಈ ನಾಟಕ ಮಾಡುತ್ತಿದೆ. ದಲಿತ ಸಮುದಾಯಗಳನ್ನು ಸೆಳೆಯಲು ಜೈ ಭೀಮ್ ಘೋಷಣೆ ಮಾಡಿದೆ ಎಂದು ಟೀಕಿಸಿದರು.