ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳ ಜಾರಿಯಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, ಸುಮಾರು 4%ರಿಂದ 5%ವರೆಗೆ (ಸುಮಾರು ₹75) ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಏರಿಕೆಯ ಪರಿಣಾಮ ಕಾಣಿಸಿಕೊಳ್ಳಲಿದೆ. 2023ರ ಏಪ್ರಿಲ್ 1ರಿಂದ ಟೋಲ್ ಸಂಗ್ರಹ ಆರಂಭವಾದ ಬಳಿಕ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಲಾದ 22% ಏರಿಕೆಯನ್ನು ಸಾರ್ವಜನಿಕ ವಿರೋಧದ ಹಿನ್ನೆಲೆ ಹಿಂಪಡೆಯಲಾಗಿತ್ತು. ಆದರೆ ವಾರ್ಷಿಕವಾಗಿ ಸರಾಸರಿ 5% ಏರಿಕೆಯನ್ನು ಮುಂದುವರಿಸಲಾಗುತ್ತಿದೆ.
ಇದಲ್ಲದೆ, ಫಾಸ್ಟ್‌ಟ್ಯಾಗ್ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಫಾಸ್ಟ್‌ಟ್ಯಾಗ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಅಥವಾ ತಾಂತ್ರಿಕ ಸಮಸ್ಯೆಯಿಂದ ಪಾವತಿ ವಿಫಲವಾದರೆ ಡಬಲ್ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.
ಪ್ರತಿ ವರ್ಷ ಏಪ್ರಿಲ್ 1ರಿಂದ ಟೋಲ್ ದರ ಪರಿಷ್ಕರಣೆ ಮಾಡುವ ಪದ್ಧತಿಯಂತೆ ಈ ಬಾರಿಯೂ ಜಾರಿಗೊಳ್ಳಲಿದ್ದು, ದೈನಂದಿನ ಪ್ರಯಾಣಿಕರು, ಉದ್ಯೋಗಿಗಳು ಮತ್ತು ವ್ಯಾಪಾರಸ್ಥರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಪ್ರಸ್ತುತ ₹3,000 ಇರುವ ಟೋಲ್ ಪಾಸ್ ದರವು ಏಪ್ರಿಲ್ 1ರಿಂದ ₹3,075ಕ್ಕೆ ಏರಿಕೆಯಾಗಲಿದೆ. ಟೋಲ್ ಪಾಸ್ ಹೊಂದಿರುವವರು 200 ಟ್ರಿಪ್‌ಗಳವರೆಗೆ ಪ್ರಯಾಣಿಸಬಹುದು. ಈ ನಿರ್ಧಾರದಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಖರ್ಚು ಹೆಚ್ಚಾಗಲಿದೆ.



