ಮಂಡ್ಯ: ಹಣಕಾಸು ವರ್ಷದ ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ದರ ಏರಿಕೆಯಾಗಿದ್ದು, ವಾಹನ ಸವಾರರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.
ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ನಡುವೆಯೇ ಇದೀಗ ಟೋಲ್ ದರ ಹೆಚ್ಚಳ ಮತ್ತಷ್ಟು ಸಂಕಷ್ಟ ತಂದಿದೆ.
ಎಕ್ಸ್ಪ್ರೆಸ್ವೇಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಹಾಗೂ ರಾಮನಗರದ ಗಣಮಿಣಕಿ ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಒಂದೇ ಮಾದರಿಯಲ್ಲಿ ದರ ಹೆಚ್ಚಿಸಲಾಗಿದೆ. ಪ್ರತಿ ಟೋಲ್ನಲ್ಲಿ 5 ರೂ.ರಿಂದ 25 ರೂ.ವರೆಗೆ ಹೆಚ್ಚಳ ಮಾಡಲಾಗಿದೆ.
118 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕಾರಿನಲ್ಲಿ ಸಂಚರಿಸುವವರಿಗೆ ಪ್ರತಿ ಟೋಲ್ಗೆ 5 ರೂ. ಹೆಚ್ಚಳವಾಗಿದ್ದು, ಎರಡು ಟೋಲ್ಗಳಿಂದ ಒಟ್ಟು 10 ರೂ. ಹೆಚ್ಚುವರಿ ಪಾವತಿಸಬೇಕಾಗಿದೆ. ಮೊದಲು ಮೈಸೂರು–ಬೆಂಗಳೂರು ಪ್ರಯಾಣಕ್ಕೆ 345 ರೂ. ಟೋಲ್ ಕಟ್ಟಬೇಕಾಗಿದ್ದರೆ, ಈಗ ಅದು 355 ರೂ.ಗೆ ಏರಿಕೆಯಾಗಿದೆ.
ವಾಹನವಾರು ಹೊಸ ಟೋಲ್ ದರಗಳು:
- ಕಾರು/ವ್ಯಾನ್/ಜೀಪ್: 170 ರೂ. → 175 ರೂ. (ಏರಿಕೆ 5 ರೂ.)
- ಲಘು ವಾಹನ/ಮಿನಿ ಬಸ್: 275 ರೂ. → 280 ರೂ. (ಏರಿಕೆ 5 ರೂ.)
- ಟ್ರಕ್/ಬಸ್ (2 ಆಕ್ಸ್ಲ್): 570 ರೂ. → 585 ರೂ. (ಏರಿಕೆ 15 ರೂ.)
- 3 ಆಕ್ಸ್ಲ್ ವಾಣಿಜ್ಯ ವಾಹನ: 625 ರೂ. → 640 ರೂ. (ಏರಿಕೆ 15 ರೂ.)
- 4–6 ಆಕ್ಸ್ಲ್ ವಾಹನ: 900 ರೂ. → 920 ರೂ. (ಏರಿಕೆ 20 ರೂ.)
- 7ಕ್ಕಿಂತ ಹೆಚ್ಚು ಆಕ್ಸ್ಲ್ ವಾಹನ: 1,095 ರೂ. → 1,120 ರೂ. (ಏರಿಕೆ 25 ರೂ.)
ಟೋಲ್ ದರ ಈಗಾಗಲೇ ಹೆಚ್ಚಿದ್ದ ಹಿನ್ನೆಲೆ ಮತ್ತಷ್ಟು ಏರಿಕೆ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ರೀತಿಯಾಗಿ ದರ ಹೆಚ್ಚಿಸುತ್ತ ಹೋದರೆ ಕಾರು ಓಡಿಸುವುದೇ ಕಷ್ಟ” ಎಂದು ಕೆಲ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



