ಗದಗ:- ಕೆಂಪು ಸುಂದರಿ ಟೊಮೆಟೊ ಬೆಲೆ ಏಕಾಏಕಿ ಪಾತಾಳಕ್ಕೆ ಕುಸಿದ ಹಿನ್ನೆಲೆ ರೈತರು ಕಂಗಾಲಾಗಿದ್ದಾರೆ. ಅದರಂತೆ ಜಿಲ್ಲೆಯ ರೈತರು ಗದಗ APMCಯಲ್ಲಿ ಟೊಮೆಟೊ ದರ ಕುಸಿತಕ್ಕೆ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
25ಕೆಜಿ ಟ್ರೇಗೆ ಕೇವಲ 50 ರೂಪಾಯಿಗೆ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಮಾರ್ಕೆಟ್ ನಲ್ಲಿ 15 ರೂಪಾಯಿ ಕೆಜಿ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಆದರೆ APMC ಯಲ್ಲಿ ಮಾತ್ರ ರೈತರ ಟೊಮೆಟೊಗೆ ಕೆಜಿಗೆ ಕೇವಲ 2 ರೂಪಾಯಿ ನೀಡಲಾಗುತ್ತಿದೆ. ಎಲ್ಲಾ ದರಗಳು ಏರಿಕೆಯಾಯ್ತು, ಆದರೆ ರೈತರು ಬೆಳೆದ ಬೆಳೆ ದರ ಯಾಕೆ ಏರುತ್ತಿಲ್ಲ ಅಂತ ಅನ್ನದಾತರು ಕಿಡಿಕಾರಿದ್ದಾರೆ. ಅಲ್ಲದೇ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ಭಾಗ್ಯ ನೀಡಬೇಕು ಅಂತ ಒತ್ತಾಯ ಮಾಡಿದ್ದಾರೆ.
ಎಕರೆಗೆ 30-50 ಸಾವಿರ ರೂ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದರು. ಈಕ ಏಕಾಏಕಿ ಬೆಲೆ ಕುಸಿತ ಆದ್ರೆ ನಮ್ಮ ಪಾಡು ಏನು ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ಟೊಮೆಟೊ ತೆಗೆದುಕೊಂಡು ಹೋದ್ರೆ 50 ರೂ. ಗೆ ಟ್ರೇ ಮಾರಾಟ ಮಾಡಲಾಗುತ್ತಿದೆ. ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮೆಟೊ ಇರುತ್ತೆ. ಅದರಂತೆ 2 ರೂ ಗೆ ಕೆಜಿಯಂತೆ ಟೊಮೆಟೊ ಮಾರಾಟ ಮಾಡಲಾಗುತ್ತಿದ್ದು, ಸರ್ಕಾರದ APMC ವರ್ತಕರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಸೂಕ್ತ ದರ ನಿಗದಿಗೆ ಒತ್ತಾಯ:-
ಮಾರ್ಕೆಟ್ ಗೆ ಕ್ವಿಂಟಾಲ್ ಗಟ್ಟಲೇ ಟೊಮೆಟೊ ತಂದ್ರೂ ರೈತರ ಕೈ ಖಾಲಿ ಖಾಲಿ ಆಗಿದೆ. ಖಾಲಿ ಚೀಟಿ ಮನೆಗೆ ಒಯ್ಯುವ ಸ್ಥಿತಿ ಬಂದಿದೆ. ಟೊಮೆಟೊ ಕಟಾವು ಮಾಡುವ ಕಾರ್ಮಿಕರಿಗೆ 300 ರೂ ದಿನ ಕೂಲಿ ಕೊಡಬೇಕು. ಮಾರುಕಟ್ಟೆಗೆ ಒಂದು ಟ್ರೇ ಹೇರಿಕೊಂಡು ಬರುವ 30 ರೂಪಾಯಿ ವಾಹನ ಬಾಡಿಗೆ ಇದೆ. ಜೊತೆಗೆ ದಲ್ಲಾಳಿ 10 ರೂಪಾಯಿ ಕೊಡಬೇಕು. ರೈತರಿಗೆ ಉಳಿದು ಒಂದು ಟ್ರೇ ಗೆ 10 ರೂ ಮಾತ್ರ. ಅದು ಚಹಾ, ನಾಸ್ಟಾ ಮಾಡಿದ್ರೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕು ಅಂತ ರೈತರು ಗೋಳಾಡಿದ್ದಾರೆ.
ಹೀಗಾದ್ರೆ ರೈತರು ಕುಟುಂಬ ನಿರ್ವಹಣೆಗೆ ತುಂಬಾನೆ ತೊಂದರೆ ಆಗುತ್ತೆ. ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದೇವೆ. ಮಾರುಕಟ್ಟೆಗೆ ತಂದ್ರೆ ಸೂಕ್ತ ದರ ಸಿಗುತ್ತಿಲ್ಲ. ಹೀಗಾದ್ರೆ ಹೇಗೆ ಮಾಡಬೇಕು. ಸರ್ಕಾರ ಟೊಮೆಟೊ ಬೆಳೆದ ರೈತರ ನೆರವಿಗೆ ಬರಬೇಕು. ಟೊಮೆಟೊ ಬೆಳೆದ ರೈತರು ಸಂಕಷ್ಟದಲ್ಲಿದೇವೆ. ಟೊಮೆಟೊ ಬೆಳೆಗೆ ಸೂಕ್ತದ ದರ ನಿಗದಿ ಮಾಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.