ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 5/6 ತಿಂಗಳಿಂದ ಕುಸಿತದ ಹಾದಿ ಕಂಡಿರುವ ಟೊಮೇಟೋ ಸೇರಿ ಇತರೆಲ್ಲ ತರಕಾರಿಗಳ ಬೆಲೆ ಮೇಲೇಳದ್ದರಿಂದ ಲಾಭಕ್ಕಿಂತ ನಷ್ಟವನ್ನೇ ಅನುಭವಿಸುತ್ತಿರುವ ತರಕಾರಿ ಬೆಳೆಗಾರರು ಭಾನುವಾರ ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಟೊಮೇಟೊವನ್ನು ರಸ್ತೆ ಬದಿ ಸುರಿದು ಅಸಮಾಧಾನ ವ್ಯಕ್ತಪಡಿಸಿದರು.
ನೀರಾವರಿ ಸೌಲಭ್ಯ ಇರುವ ರೈತರು ಸ್ವಾವಲಂಬಿ ಜೀವನದ ಮೂಲಕ ತಮ್ಮ ಬದುಕಿನ ಬಂಡಿ ಸಾಗಿಸಲು ಲಕ್ಷಾಂತರ ರೂ ಖರ್ಚು ಮಾಡಿ ಹಗಲೂ-ರಾತ್ರಿ ಕಷ್ಟಪಟ್ಟು ಬೆಳೆದ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೇ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲಕ್ಷ್ಮೇಶ್ವರ ತಾಲೂಕಿನ ರೈತರಲ್ಲದೇ ನೆರೆಯ ಸವಣೂರ, ಶಿಗ್ಗಾಂವ, ಹಾವೇರಿ, ಶಿರಹಟ್ಟಿ ತಾಲೂಕಿನ ಅನೇಕ ಗ್ರಾಮಗಳಿಂದ ಲಕ್ಷ್ಮೇಶ್ವರ ಮಾರುಕಟ್ಟೆಗೆ ನಿತ್ಯ 500/600 ಬಾಕ್ಸ್ ಟೊಮೆಟೊ ಬರುತ್ತದೆ. ಹಗಲೆಲ್ಲ ಕಟಾವು ಮಾಡಿ ಹತ್ತಾರು ಕಿ.ಮೀ ದೂರದಿಂದ ನಸುಕಿನಲ್ಲಿಯೇ ಮಾರುಕಟ್ಟೆಗೆ ತರುತ್ತಾರೆ. ಆದರೆ ಹರಾಜಿನಲ್ಲಿ ಒಂದು ಬಾಕ್ಸ್ಗೆ ಕೇವಲ 30-50 ರೂ.ವರೆಗೆ ಮಾರಾಟವಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಇಂದಲ್ಲ ನಾಳೆ ದರ ಬರುತ್ತದೆ ಎಂಬ ಆಶಾಭಾವನೆಯಿಂದ ನಷ್ಟ ಅನುಭವಿಸುತ್ತಲೇ ಬರುತ್ತಿರುವ ರೈತರು ಗೋಳನ್ನು ಕೇಳುವವರೇ ಇಲ್ಲದಾಗಿದೆ.
ತಾಲೂಕಿನ ಹುಲ್ಲೂರು ಗ್ರಾಮದ ಶಂಭು ಮೇಟಿ, ಅಮರಾಪುರದ ರಮೇಶ ಕೆರೆಕೊಪ್ಪ, ಸವಣೂರ ತಾಲೂಕಿನ ಬಸನಕೊಪ್ಪದ ಯಲ್ಲಪ್ಪ ಇಟಗಿ, ಯಲವಿಗಿಯ ಮಂಜುನಾಥ ಮಲಸಮುದ್ರ, ಮಾರುತಿ ಒಡ್ಡರ, ಕಡಕೋಳದ ಚಂದ್ರು ಧರೆಪ್ಪನವರ ಮುಂತಾದ ರೈತರು ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ತರಕಾರಿ ಬೆಳೆಗಳು ಕುಟುಂಬ ನಿರ್ವಹಣೆಗೆ ಆದಾಯದ ಮೂಲವಾಗಿದೆ. ವರ್ಷದುದ್ದಕ್ಕೂ ಕಷ್ಟಪಟ್ಟು ದುಡಿದು ಸಾವಿರಾರು ರೂ ಖರ್ಚು ಮಾಡಿ ತರಕಾರಿಯನ್ನೇ ಬೆಳೆದು ಮಾರಾಟ ಮಾಡಿ ಬದುಕು ಸಾಗಿಸುವ ನಮ್ಮಂತಹ ರೈತರ ಪರಿಸ್ಥಿತಿ ನಷ್ಟದಲ್ಲಿ ಮುಳುಗಿದೆ.
ಕಳೆದ ಐದಾರು ತಿಂಗಳಿಂದ ತರಕಾರಿ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ಟೊಮೆಟೊ, ಸೌತೆ, ಬದನೆ, ಹೀರೆ ಹೀಗೆ ಬಹುತೇಕ ತರಕಾರಿಗಳಿಗೆ ಬೆಲೆ ಇಲ್ಲದೇ ಮಾಡಿದ ಖರ್ಚು ಸಹ ಕೈಗೆ ಬರುತ್ತಿಲ್ಲ. ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ಆಳಿನ ಖರ್ಚು, ಸಾರಿಗೆ ವೆಚ್ಚಕ್ಕೆ ಸರಿ ಹೊಂದದಂತಾಗಿ ನೋವಿನಿಂದ ಬರಿಗೈಲಿ ಮನೆಗೆ ಹೋಗುವಂತಾಗಿದೆ ಎಂದರು.
ಸರಕಾರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ರೈತರ ಯಾವುದೇ ಬೆಳೆ, ತರಕಾರಿಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ರೈತರು ತಮ್ಮ ಬೆಳೆ ಮಾರಾಟ ಮಾಡಿದ ಮೇಲೆ ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸುತ್ತಾರೆ. ಈ ವ್ಯವಸ್ಥೆಯಿಂದ ಅನ್ನ ನೀಡುವ ರೈತರ ಬದುಕು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವುದು ತಪ್ಪುತ್ತಿಲ್ಲ. ಸರಕಾರವೇ ರೈತರ ತರಕಾರಿ ಬೆಳೆಗಳನ್ನು ಖರೀದಿಸಿ ಬಿಸಿಯೂಟ, ಹಾಸ್ಟೇಲ್, ದೇವಸ್ಥಾನಗಳ ಪ್ರಸಾದ ಸೇವೆ ಮತ್ತು ಮುಖ್ಯವಾಗಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರದೊಂದಿಗೆ ತರಕಾರಿಗಳನ್ನು ಉಚಿತವಾಗಿ ಕೊಡುವ ಮೂಲಕ ತರಕಾರಿ ಬೆಳೆಗಾರರ ಕಣ್ಣೀರೊರೆಸಲು ಮುಂದಾಗಬೇಕು ಎಂದು ತರಕಾರಿ ಬೆಳೆಗಾರರು ಆಗ್ರಹಿಸಿದರು.
ಜೀವನ ಸಾಗಿಸಲು ರೈತರು ಅಲ್ಪಾವಧಿ ತರಕಾರಿ ಬೆಳೆಯುತ್ತಾರೆ. ಆದರೆ ತರಕಾರಿ ಬೆಳೆಗಳಿಗೂ ಕಿಮ್ಮತ್ತಿಲ್ಲದ್ದರಿಂದ ಸಾಕಷ್ಟು ಹಾನಿ ಅನುಭವಿಸಿ ಸಂಕಷ್ಟಕ್ಕೀಡಾಗಿದ್ದಾರೆ. ಲಕ್ಷ ರೂ ಖರ್ಚು ಮಾಡಿ ಬೆಳೆದ ಟೊಮೆಟೋ ಭರಪೂರ ಬೆಳೆ ಬಂದಿದ್ದರೂ ಐದಾರು ತಿಂಗಳಿಂದ ಬೆಲೆ ಇಲ್ಲದ್ದರಿಂದ ಅನೇಕ ರೈತರ ಜಮೀನಿನಲ್ಲಿ ಕೊಳೆಯುತ್ತಿದೆ. ಅಲ್ಲದೇ ಸದ್ಯಕ್ಕೆ ದರ ಹೆಚ್ಚಳವಾಗದು ಎಂಬುದನ್ನರಿತು ಬೆಳೆ ನಾಶ ಪಡಿಸುತ್ತಿದ್ದಾರೆ. ಬೆಳೆ ಬೆಳೆದ ರೈತರು ಕಣ್ಣೀರಿಡುತ್ತಿದ್ದಾರೆ. ತರಕಾರಿ ಬೆಳೆಗಳ ದರ ಕಡಿಮೆಯಾದಾಗ ಅವುಗಳನ್ನು ಸಂಗ್ರಹಿಸಿಡುವದಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಅವಕಾಶವಿದ್ದು, ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗೆ ಸರಕಾರ ತಕ್ಷಣ ಮುಂದಾಗಬೇಕು ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ ಕೊಡಬೇಕು.
– ಗಂಗಾಧರ ಮೆಣಸಿನಕಾಯಿ.
ರೈತ ಮುಖಂಡ.
– ಮಂಜುನಾಥ ಹೊಗೆಸೊಪ್ಪಿನ.
ತರಕಾರಿ ದಲ್ಲಾಳಿ.