ವಿಜಯಸಾಕ್ಷಿ ಸುದ್ದಿ, ಗದಗ : ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ, ಮಹದಾಯಿ ನದಿ ಜೋಡಣೆ ಯೋಜನೆಯನ್ನು ಅತ್ಯಂತ ಶೀಘ್ರವಾಗಿ ಆರಂಭಿಸುವಂತೆ ಹಾಗೂ ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಆಗ್ರಹಿಸಿ ಸೆ. 19ರಿಂದ ನರಗುಂದ ಪಟ್ಟಣದ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಹೋರಾಟ ಆರಂಭಿಸಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಆರ್.ಬೇಲೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ, ಮಹದಾಯಿ ನದಿ ಜೋಡಣೆ ಹಾಗೂ ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ನರಗುಂದ ಪಟ್ಟಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಿದ್ದೇವೆ. ಪಾದಯಾತ್ರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ವಿಶ್ರಾಂತ ಗಣ್ಯ ವ್ಯಕ್ತಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಮತ್ತು ರೈತ ಹೋರಾಟಗಾರರು, ಮಹಿಳೆಯರು, ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕುರ್ಲಗೇರಿ, ತಡಹಾಳ, ನಾಯ್ಕನೂರು ಗ್ರಾಮದ ಮೂಲಕ ಶಲವಡಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು. ಸೆ. 20ರಂದು ಶಲವಡಿ ಗ್ರಾಮದಿಂದ ತುಪ್ಪದಕುರಹಟ್ಟಿ, ವೆಂಕಟಾಪೂರ, ಹೊಂಬಳ ಮೂಲಕ ಗದಗ ಪ್ರವೇಶಿಸಿ ಹೊಂಬಳನಾಕಾ, ಗಂಗಾಪೂರಪೇಟೆ, ಡಿಸಿ ಮಿಲ್ ರೋಡ್, ತಹಸೀಲ್ದಾರ ಕಚೇರಿ, ಗಾಂಧಿ ಸರ್ಕಲ್, ಪುಟ್ಟರಾಜ ಸರ್ಕಲ್, ಬಸವೇಶ್ವರ ಸರ್ಕಲ್, ಬಿಎಸ್‌ಎನ್‌ಎಲ್ ಟವರ್ ರೋಡ್ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದಾವಲಸಾಬ್ ಮುಳಗುಂದ ಮಾತನಾಡಿ, ಕಳಸಾ-ಬಂಡೂರಿ ನಾಲಾ ಜೋಡಣೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರೈತರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ. ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಈ ಯೋಜನೆ ಕೈಗೆತ್ತಿಕೊಳ್ಳಲು ಆಗಲಿಲ್ಲ. ಕಪ್ಪತಗುಡ್ಡ ರಕ್ಷಣೆಗಾಗಿ ಹೋರಾಟದ ರೂಪುರೇಷೆ ಸಿದ್ದಪಡಿಸಿದ್ದೇವೆ. ಸೆಪ್ಟಂಬರ್ 19ರಂದು ನರಗುಂದ ಪಟ್ಟಣದಿಂದ ಪಾದಯಾತ್ರೆ ನಡೆಸಲು ತಿರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುತ್ತುರಾಜ್ ಎಸ್.ಅರಗಿನಶೆಟ್ಟಿ, ತಿಮ್ಮಣ್ಣ ಈ.ಡೋಣಿ, ಮಂಜುನಾಥ, ಪರಶುರಾಮ ಬಂಕದಮನಿ, ರಾಜೇಶ್ ಡವಳೆ, ಹನಮಂತಸಾ ಶಿದ್ಲಿಂಗ ಉಪಸ್ಥಿತರಿದ್ದರು.
ಕನ್ನಡ ನಾಡು, ನುಡಿಗಾಗಿ ನಿರಂತರವಾಗಿ ಹೋರಾಡುತ್ತಿದ್ದೇವೆ. ಕೊರೋನಾ ಸಮಯದಲ್ಲಿ ಎರಡು ವರ್ಷ ಹೋರಾಟಕ್ಕೆ ಸ್ವಲ್ಪ ವಿರಾಮ ನೀಡಿದ್ದೆವು. ಆದರೆ, ಈಗ ಮತ್ತೆ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಮಹದಾಯಿ, ಕಳಸಾ-ಬಂಡೂರಿ ಹೋರಾಟದ ಜೊತೆಗೆ ಸ್ಥಳೀಯ ಸಮಸ್ಯೆಗಳ ನಿವಾರಣೆಗೂ ಹೋರಾಟ ನಡೆಸಲಿದ್ದೇವೆ. ಸೆ. ೧೯ರಂದು ನಡೆಯುವ ಪಾದಯಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದು, ವಿವಿಧ ಸಂಘಟನೆಯ ಮುಖಂಡರು, ಮಠಾಧೀಶರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
– ಪಾಪು ಧಾರೆ.
ಬೆಳಗಾವಿ ವಿಭಾಗಿಯ ಅಧ್ಯಕ್ಷ,
ಕರವೇ (ಪ್ರವೀಣ ಶೆಟ್ಟಿ ಬಣ)