ನಾಳೆ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಫೆ.22ರಂದು ಬೆಳಿಗ್ಗೆ 11.30ಕ್ಕೆ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಆದ್ರಳ್ಳಿ ಗವಿಸಿದ್ದೇಶ್ವರ ಮಠದ ಡಾ. ಕುಮಾರ ಮಹಾರಾಜರು ಹೇಳಿದರು.

Advertisement

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಕುಂದಗೋಳದ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲ, ಮಾಜಿ ಸಚಿವ ಬಿ. ಶ್ರೀರಾಮುಲು, ಪಿ. ರಾಜೀವ, ಬಸವರಾಜ ನಾಯಕ, ಶಾಸಕ ಡಾ. ಚಂದ್ರು ಲಮಾಣಿ, ಭರತ್ ಬೊಮ್ಮಾಯಿ, ಅರುಣಕುಮರ ಪೂಜಾರ, ಶಾರದಾ ಪೂರಿಯಾನಾಯಕ, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಕೃಷ್ಣ ದೊಡ್ಡಮನಿ, ಸುಜಾತ ದೊಡ್ಡಮನಿ, ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಸೇರಿ ಬೋವಿ, ಕೊರಮ, ಕೊರಚ ಇತರೇ ಲಿಂಗಾಯತ ಸಮಾಜದ ಜಿಲ್ಲಾ, ತಾಲೂಕು ಅಧ್ಯಕ್ಷರು, ಎಲ್ಲ ತಾಂಡಾಗಳ ಡಾವ್-ಕಾರಬಾರಿ ಸಮಾಜದ ಹಿರಿಯರು, ಯುವಕರು ಆಗಮಿಸುವರು. ಬಂಜಾರ್ ಗಾಯಕ ರಮೇಶ ಲಮಾಣಿ, ಮುತ್ತುರಾಜ ಜೀವಾ ಪಿ.ಎಸ್, ಶಂಕರನಾಯಕ (ಕವಿರಾಜ), ರಾಜೀವ ಬಂಡ್ರಿ ತಾಂಡಾ, ನೇಮಿರಾಜ ನಾಯಕ ಸೇರಿ ಹಲವರು ಆಗಮಿಸುವರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಜಯಂತ್ಯುತ್ಸವದ ಬಳಿಕ ಸಮಾಜದವರನ್ನು ಒಗ್ಗೂಡಿ ಸರ್ವಾನುಮತದಿಂದ ಬಂಜಾರ್ ಸಮಾಜದ ಹೊಸ ತಾಲೂಕು ಸಂಘಟನೆ ಸೃಜಿಸಲಾಗುವುದು. ಆ ಮೂಲಕ ಸಮಾಜದ ಸಂಘಟನೆಗೆ ಒತ್ತು ಕೊಡಲಾಗುವುದು. ಬಂಜಾರ ಸಮಾಜ ಲವ್ ಜಿಹಾದ್, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವುದು ಸೇರಿ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನೋವು-ಸಂಕಷ್ಟದಲ್ಲಿದೆ. ಆದರೆ ಈ ಬಗ್ಗೆ ಚಿಂತನೆ ಮಾಡಬೇಕಾದ ಸಮಜದ ಸಂಘಟನೆಯ ಜವಾಬ್ದಾರಿ ಹೊತ್ತವರು ವರ್ಷಕ್ಕೊಮ್ಮೆ ಹಣ ಸಂಗ್ರಹಿಸಿ ಸೇವಾಲಾಲ್ ಜಯಂತಿ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಮಾಜವನ್ನು ಬಳಸಿಕೊಳ್ಳುತ್ತಿದ್ದು, ಸಮಾಜದ ಹೆಸರು ಕೆಡಿಸುತ್ತಿದ್ದಾರೆ.

ಈ ಬಗ್ಗೆ ಶಾಸಕರಿಗೆ, ಸಮಾಜದ ಹಿರಿಯರ ಗಮನಕ್ಕೂ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಸಮಾಜ ಸಂಘಟನೆಯ ಜವಾಬ್ದಾರಿ ಹೊತ್ತಿರುವವರು ಈ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಸಂಘದ ನಿಯಮಾವಳಿಯನ್ನು ಗಾಳಿಗೆ ತೂರಿ ತಮ್ಮ ವೈಯಕ್ತಿಕ ದ್ವೇಷ, ಹಗೆ ಸಾಧಿಸಿಕೊಳ್ಳುತ್ತಿದ್ದಾರೆ. ಇದು ಸಮಾಜದ ಒಗ್ಗಟ್ಟು, ಸಂಘಟನೆ ದೃಷ್ಟಿಯಿಂದ ಸರಿಯಲ್ಲ. ಸರ್ವ ಸಮಾಜದ ಪ್ರೀತಿ, ವಿಶ್ವಾಸದೊಂದಿಗೆ ಸಮಾಜ ಬೆಳೆಯುವಂತಾಗಬೇಕು ಎಂದರು.

18 ವರ್ಷಗಳಿಂದ ಏಕಪಕ್ಷೀಯ ನಿರ್ಧಾರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೇಶ್ವರ ತಾಲೂಕು ಬಂಜಾರ್ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನೊಳಗೊಂಡ ತಾಲೂಕು ಕಮಿಟಿ ಬದಲಾಗಬೇಕು ಮತ್ತು ಶನಿವಾರ ಶಿರಹಟ್ಟಿ ನಡೆಯುತ್ತಿರುವ ತಾಲೂಕು ಮಟ್ಟದ ಸೇವಾಲಾಲ ಜಯಂತಿಗೆ ಜಿಲ್ಲಾ ಕಮಿಟಿ, ಸಮಾಜದ ಸ್ವಾಮಿಗಳು ಮತ್ತು ಅನೇಕ ಹಿರಿಯರನ್ನು ಪರಿಗಣಿಸಿಲ್ಲದ ಕಾರಣ ತಾವು ಆದ್ರಳ್ಳಿ ಗ್ರಾಮದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯಮಟ್ಟದ ಸೇವಾಲಾಲ್ ಜಯಂತಿ ಆಚರಣೆಗೆ ಮುಂದಾಗಿದ್ದೇವೆ ಎಂದು ಶ್ರೀಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here