ಹುಬ್ಬಳ್ಳಿ: ಕೊಪ್ಪಳ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ತೆರಿಗೆ ಉಪನಿರ್ದೇಶಕ ಎಸ್.ಎಂ. ಚವ್ಹಾಣ್ ಅವರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರೀ ಪ್ರಮಾಣದ ನಗದು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಅಕ್ರಮ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ.
ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ನಿವಾಸದಲ್ಲಿ ಅಪಾರ ಪ್ರಮಾಣದ ನಗದು, ಬಂಗಾರ ಹಾಗೂ ಬೆಳ್ಳಿ ಪತ್ತೆಯಾಗಿದ್ದು,. ಅಲ್ಲದೇ ವಿವಿಧ ಕಡೆ ಇರುವ 12 ಸೈಟ್, ಮೂರು ಮನೆ, ಆರು ಎಕರೆ ಜಮೀನಿನ ದಾಖಲೆ ಸಹ ಲಭ್ಯವಾಗಿದೆ.
ಡಿವೈಎಸ್‌ಪಿ ಆರ್ ವಸಂತ್ ಕುಮಾರ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ದಾಳಿ ವೇಳೆ ಬೆಳ್ಳಿ ದೇವರ ಮಂಟಪ, ಬಂಗಾರದ ಗಣೇಶ ಮೂರ್ತಿ ಸಹ ಪತ್ತೆಯಾಗಿದೆ. ಇಲ್ಲಿಯವರೆಗೂ ಮನೆಯ ಎರಡು ಕೊಠಡಿಗಳನ್ನು ಮಾತ್ರ ತಪಾಸಣೆ ಮಾಡಲಾಗಿದೆ. ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಹಿನ್ನೆಲೆ, ಇಲ್ಲಿಯವರೆಗೆ 52 ಲಕ್ಷ ಹಣವನ್ನು ಅಧಿಕಾರಿಗಳು ಎಣಿಸಿದ್ದಾರೆ. ಎಣಿಕೆ ಕಾರ್ಯ ಇನ್ನೂ ಮುಂದುವರಿದಿದೆ.