ತೋಂಟದಾರ್ಯ ಜಾತ್ರೆ ಆದರ್ಶದ ಜಾತ್ರೆ:ಮೃತ್ಯುಂಜಯ ಮಹಾಸ್ವಾಮಿ

0
tontadarya jatre
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜನರನ್ನು ಆಕರ್ಷಣೆ ಮಾಡುವ ಜಾತ್ರೆಗಳು ನಾಡಿನಲ್ಲಿ ಸಾಕಷ್ಟು ಇರಬಹುದು. ಆದರೆ, ಅವೆಲ್ಲಕ್ಕೂ ಭಿನ್ನವಾಗಿ ತೋಂಟದಾರ್ಯ ಮಠದ ಜಾತ್ರೆಯು ಆಕರ್ಷಣೆಯ ಜಾತ್ರೆಯಾಗದೇ ಆದರ್ಶದ ಜಾತ್ರೆಯಾಗಿದೆ ಎಂದು ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.

Advertisement

ಅವರು ಇತ್ತೀಚೆಗೆ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಮಂಗಲೋತ್ಸವ ವೇದಿಕೆ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವೇಶ್ವರರು ಕಲ್ಯಾಣದ ಮಂತ್ರಿಯಾಗಿ ಇನ್ನೊಂದು ರಾಜ್ಯವನ್ನು ಕಟ್ಟುವಷ್ಟು ಸಶಕ್ತರಾಗಿದ್ದರು. ಆದರೆ, ಅವರು ಭೌತಿಕ ಸಿರಿ-ಸಂಪತ್ತಿನ ರಾಜ್ಯವನ್ನು ಕಟ್ಟದೇ ಜ್ಞಾನದ ರಾಜ್ಯವನ್ನು ನಿರ್ಮಿಸಿದರು. ಬಸವೇಶ್ವರರು ಬರುವ ಪೂರ್ವದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಮಹಿಳೆಯರಿಗೆ ಯಾವುದೇ ಸಾಮಾಜಿಕ ಸ್ಥಾನಮಾನ ಇದ್ದಿಲ್ಲ ಎಂಬುದು ಅಚ್ಚರಿಯಾದರೂ ನಿಜ. ಇಂದು ಬಸವತತ್ವವನ್ನು ಬಾಯಲ್ಲಿ ಹೇಳುತ್ತಾ ಅದನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಿಂಜರಿಯುವ ಜನರಿರುವಾಗ ಲಿಂ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅಕ್ಷರಶಃ ಬಸವತತ್ವವನ್ನು ಪಾಲಿಸಿದ್ದರು. ಅನೇಕ ಧಾರ್ಮಿಕ ನಾಯಕರನ್ನು ಬೆಳೆಸಿದ ಲಿಂಗೈಕ್ಯ ಗುರುಗಳು ನಾನು ವಟುವಾಗಿದ್ದಾಗ ಕಾಣಿಕೆ ನೀಡಿ ಆಶೀರ್ವದಿಸಿದ್ದರು ಎಂದು ಸ್ಮರಿಸಿದರು.

ಇಳಕಲ್‌ದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ಮಾತನಾಡಿ, ಒಂದು ಕಾಲದಲ್ಲಿ ರಾಜರ ಆಶ್ರಯದಲ್ಲಿ ಸಿರಿ-ಸಂಪತ್ತುಗಳಿಂದ ವೈಭವಯುತವಾಗಿದ್ದ ತೋಂಟದಾರ್ಯ ಮಠವು ಲಿಂ.ಸಿದ್ಧಲಿಂಗ ಶ್ರೀಗಳು ಪೀಠವನ್ನೇರುವ ಮುನ್ನ ಅಕ್ಷರಶಃ ಬರಡಾಗಿತ್ತು. ನಾಲ್ಕು ದಶಕಗಳ ಕಾಲ ಅವಿರತ ಶ್ರಮಿಸಿದ ಸಿದ್ಧಲಿಂಗ ಶ್ರೀಗಳು ಮಠಕ್ಕೆ ಹಳೆಯ ವೈಭವದ ಜೊತೆಗೆ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟರು. ಬಸವತತ್ವಗಳ ನಿಜಾಚರಣೆಗಳನ್ನು ಪಾಲಿಸುತ್ತಿದ್ದ ಲಿಂಗೈಕ್ಯ ಗುರುಗಳು ನಮಗೆಲ್ಲ ಮಾದರಿಯಾಗಿದ್ದು, ಲಿಂಗಾಯತ ಮಠಗಳು ತಮ್ಮ ನಿಜಾಚರಣೆಯನ್ನು ಮರೆಯದೇ ಸಮಾಜಕ್ಕೆ ಅವುಗಳ ಮೌಲ್ಯವನ್ನು ಪಸರಿಸಬೇಕಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಪ್ರೊ. ಕೆ.ಎಚ್ ಬೇಲೂರ ಸ್ವಾಗತಿಸಿದರು. ಜಾತ್ರಾ ಸಮಿತಿ ಉಪಾಧ್ಯಕ್ಷರಾದ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿಗಳಾದ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷರಾದ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷರಾದ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಜಡೆಸಿದ್ಧೇಶ್ವರ ಬಿಲ್ವಾಶ್ರಮದ ಡಾ.ಮಹಾಂತ ಸಿದ್ಧೇಶ್ವರ ಸ್ವಾಮಿಗಳು, ಹೈದರಾಬಾದ್‌ನ ಶಿವ ಹಂಸಾರೂಢ ಮಹಾಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಗಡಹಿಂಗ್ಲಜ ಬಿಲ್ವಾಶ್ರಮದ ತಾಯಂದಿರು ಸಂಗೀತ ಕಾರ್ಯಕ್ರಮ ನೀಡಿದರು.


Spread the love

LEAVE A REPLY

Please enter your comment!
Please enter your name here