ಹೊಸವರ್ಷ ಆಚರಣೆಗೆ ಬೆಂಗಳೂರಲ್ಲಿ ಟಫ್‌ ರೂಲ್ಸ್‌ ಜಾರಿ! ಪೊಲೀಸ್‌ ಆಯುಕ್ತರ ಆದೇಶಗಳೇನು?

0
Spread the love

ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಭಾಕಿ ಉಳಿದಿದೆ. ಬಹುತೇಕ ಜನ 2025 ನ್ನು ಬರ ಮಾಡಿಕೊಳ್ಳಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ವಿಶೇಷ ಸಂಭ್ರಮಾಚರಣೆ ಮಾಡುವುದನ್ನುಪ್ರತೀ ವರ್ಷವೂ ನಾವು ಕಾಣುತ್ತೇವೆ. ಮಧ್ಯರಾತ್ರಿ ಕಳೆದರೂ ಹೊಸ ವರ್ಷದ ಸಂಭ್ರಮ ಮುಗಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಮಿಷನರ್​ ಕಚೇರಿಯಲ್ಲಿ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

Advertisement

ರೆಸ್ಟೋರೆಂಟ್, ಹೋಟೆಲ್ ಮತ್ತು ಪಬ್​ಗಳನ್ನು ಹೊಸ ವರ್ಷಾಚರಣೆ ದಿನ (ಡಿಸೆಂಬರ್​.31) ರಂದು ರಾತ್ರಿ 1 ಗಂಟೆಯ ಒಳಗಾಗಿ ಬಂದ್​​ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಅಂದು, ನಶೆಯಲ್ಲಿ ಮೇಲ್ಸೇತುವೆಗಳ ಮೇಲೆ ರಂಪಾಟ ಮಾಡುವ, ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲ ಮೇಲ್ಸೇತುವೆಗಳನ್ನು ಬಂದ್​ ಮಾಡಲಾಗುತ್ತದೆ ಎಂದರು.

ಬೆಂಗಳೂರು ಹೊರ ವಲಯದಲ್ಲಿ ನಡೆಯುವ ರೇವ್ ಪಾರ್ಟಿ ಸೇರಿದಂತೆ ಎಲ್ಲ ಪಾರ್ಟಿಗಳ ಮೇಲೆ ಕಣ್ಣಿಡಲಾಗಿದೆ. ಇನ್ನು, ನಗರದಲ್ಲಿ ಎಂಜಿ ರೋಡ್, ಬ್ರಿಗೆಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿ ಎಲ್ಲಿ ಹೆಚ್ಚು ಜನರು ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋಣ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ, ಶ್ವಾನದಳದಿಂದ ತಪಾಸಣೆ ಮಾಡಲಾಗುತ್ತೆ. ಹೆಚ್ಚಿನ ಲೈಟಿಂಗ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ದಳ ವಾಹನ ಇರುತ್ತದೆ ಎಂದು ತಿಳಿಸಿದರು.

ಬ್ರಿಗೆಡ್, ಎಂಜಿ ರೋಡ್​​ನಲ್ಲಿ ಏಕಮುಖ ಸಂಚಾರವಿರುತ್ತದೆ. ಡಿಸೆಂಬರ್​ 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ ಎಂದು ಮಾಹಿತಿ ನೀಡಿದರು.

 


Spread the love

LEAVE A REPLY

Please enter your comment!
Please enter your name here