ಉಡುಪಿ: ಜಿಲ್ಲೆಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಅಚಾನಕ್ ಮಗುಚಿ ಬಿದ್ದು ಭಯಾನಕ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಪಘಾತದಲ್ಲಿ ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡ ಎರಡು ಬೋಟ್‌ಗಳಲ್ಲಿ ಸಮುದ್ರ ವಿಹಾರಕ್ಕೆ ತೆರಳಿತ್ತು. ಪ್ರತಿ ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲು ಬಳಿ ಸಮುದ್ರದ ಭಾರೀ ಅಲೆಗಳ ನಡುವೆ ಒಂದು ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪ್ರವಾಸಿಗರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ನೀರಿನಿಂದ ಹೊರತೆಗೆಯಲಾದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



