ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲೊಂದಾದ ಶ್ರೀ ತ್ರೀಕೂಟೇಶ್ವರ ದೇವಸ್ಥಾನದಲ್ಲಿ ಜುಲೈ 15ರಂದುಬೆಳಿಗ್ಗೆ ದೇವರ ಸ್ವರೂಪವೆಂದು ಪೂಜಿಸುವ ಗೂಳಿಯೊಂದು ಅಪಘಾತದಲ್ಲಿ ಗಾಯಗೊಂಡು ದೇವಸ್ಥಾನದ ಒಳಗೆ ಬಂದು ತೀವ್ರ ರಕ್ತಸ್ರಾವದಿಂದ ನರಳಾಡಿ ಬಳಲುತ್ತಿತ್ತು.
ದೇವಸ್ಥಾನಕ್ಕೆ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಮಾಹಿತಿ ಹಾಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ `ಪ್ರವಾಸಿ ಮಿತ್ರ’ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸರಿತಾ ಎಲ್.ಬುಟ್ಟಿ ಕೊರವರ ಮತ್ತು ಕನಕರಾಜ ಹು.ಮೂಲಿಮನಿಯವರು ಆ ಮೂಕ ಪ್ರಾಣಿಯ ರೋದನೆ ಕಂಡು ಕೂಡಲೇ ಪಶು ಸಂರಕ್ಷಣಾ ಸಹಾಯವಾಣಿಗೆ ಕರೆ ಮಾಡಿ ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದರು.
ಮಾಹಿತಿ ಪಡೆದ ಪಶು ವೈದ್ಯಾಧಿಕಾರಿಗಳು ಅವರ ತಂಡದೊಂದಿಗೆ ದೇವಸ್ಥಾನಕ್ಕೆ ಬಂದು ತೀವ್ರವಾಗಿ ಗಾಯಗೊಂಡ ಗೂಳಿಗೆ ಚಿಕಿತ್ಸೆ ನೀಡಿ, ಮೂಕ ಪ್ರಾಣಿಯ ಜೀವ ಉಳಿಸಿದರು. `ಪ್ರವಾಸಿ ಮಿತ್ರ’ ಸಿಬ್ಬಂದಿಯವರ ಸಮಯ ಪ್ರಜ್ಞೆಯಿಂದ ಸಿಕ್ಕ ಮಾಹಿಯ ಮೇರೆಗೆ ಒಂದು ಜೀವ ಉಳಿದಿದೆ ಎಂದು ಪಶು ವೈದ್ಯಾಧಿಕಾರಿಗಳು ಶ್ಲಾಘಿಸಿದರು.