ಬೆಂಗಳೂರು:- ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಟೋಯಿಂಗ್ ವ್ಯವಸ್ಥೆ ಪ್ರಾರಂಭಿಸುತ್ತೇವೆ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದೆ ಟ್ರಾಫಿಕ್ ಸಮಸ್ಯೆಗೆ ಟೋಯಿಂಗ್ ಮಾಡುತ್ತಿದ್ವಿ. ಮತ್ತೆ ಅದನ್ನು ಜಾರಿಗೆ ತರುತಿದ್ದೇವೆ. ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಸ್ಗಳನ್ನು ಬಳಸಿಕೊಂಡು ಟೋಯಿಂಗ್ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದೇನೆ. ಬಿಬಿಎಂಪಿ ಮತ್ತು ಪೊಲೀಸರು ಒಟ್ಟಾಗಿ ಕಾರ್ಯಚರಣೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಬೆಂಗಳೂರಿನ 19 ಕಡೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಕಾರಣವನ್ನು ಎಂದು ಟ್ರಾಫಿಕ್ ಪೊಲೀಸರು ಗುರುತಿಸಿದ್ದಾರೆ. ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಕ್ರಮ ತೆಗೆದುಕೊಂಡಿದ್ದೇವೆ. ಮಹಿಳೆಯರ ಸುರಕ್ಷತೆ ಸಲುವಾಗಿ ಬೆಂಗಳೂರು ನಗರದಲ್ಲಿ 9 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದಲ್ಲಿ 30 ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದ್ದೇವೆ. ರಾತ್ರಿ ವೇಳೆ ಮಹಿಳೆಯರು ಓಡಾಡುವ ಡಾರ್ಕ್ ಏರಿಯಾಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ. ನಿರ್ಭಯ ಯೋಜನೆಯಡಿ ಕೇಂದ್ರ ಸರ್ಕಾರ 667 ಕೋಟಿ ರೂ. ನೀಡಿದೆ. ಈ ಹಣವನ್ನು ಮಹಿಳೆಯರ ಸುರಕ್ಷತೆಗಾಗಿ ಖರ್ಚು ಮಾಡಿದ್ದೇವೆ. ಬೆಂಗಳೂರು ಸುರಕ್ಷಿತ ನಗರಗಳಲ್ಲಿ ಒಂದು ಎಂದು ಹೈದರಾಬಾದ್ನ ಸಂಸ್ಥೆಯೊಂದು ವರದಿ ನೀಡಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಿದ್ದೇವೆ. ಇನ್ನೂ ಅನೇಕ ಕಡೆ ಡ್ರಗ್ಸ್ ಸಿಗುತ್ತಿದೆ. ಈ ಬಗ್ಗೆ ಮಾಹಿತಿ ಇದೆ. ಡ್ರಗ್ಸ್ ಮಾರಾಟ ಸಂಬಂಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಇನ್ಸ್ಪೆಕ್ಟರ್ಗಳು ಜವಾಬ್ದಾರಿಯಾಗಿರುತ್ತಾರೆ. ಡ್ರಗ್ಸ್ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಕೆಲವು ಸೂಚನೆ ನೀಡಿದ್ದೇನೆ ಎಂದರು.