ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಟೋಯಿಂಗ್ ಕಾರ್ಯಾಚರಣೆ ಪುನರ್ ಪ್ರಾರಂಭವಾಗಲಿದೆ.
ಜಿಬಿಎ ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು, ವಾಹನಗಳು ಹಾಗೂ ಸಿಬ್ಬಂದಿ ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗಿದೆ.
ಟೋಯಿಂಗ್ ಇಲ್ಲದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡೋದು, ಅಡ್ಡಾದಿಡ್ಡಿ ನಿಲ್ಲಿಸಿ ಹೋಗೋದು, ಹಳೆಯ ವಾಹನಗಳನ್ನು ಪಾರ್ಕ್ ಮಾಡಿ, ತಿಂಗಳಗಟ್ಟಲೇ ರಸ್ತೆಯಲ್ಲೇ ಬಿಡ್ತಿದ್ದ ಕಾರಣದಿಂದಾಗಿ ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಜಾಸ್ತಿಯಾಗಿದೆ. ಇದರ ಬಗ್ಗೆ ದೂರುಗಳು ಬಂದ ಹಿನ್ನೆಲೆ ಕೆಲ ದಿನಗಳ ಹಿಂದಷ್ಟೆ ಡಿಸಿಎಂ ಡಿಕೆ ಶಿವಕುಮಾರ್ ನಗರದಲ್ಲಿ ಮತ್ತೆ ಟೋಯಿಂಗ್ ಆರಂಭಿಸೋ ಬಗ್ಗೆ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆಗಿದ್ದ ಪೊಲೀಸ್ ಇಲಾಖೆ, ಟೋಯಿಂಗ್ ಮಾಡೋಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ತಲಾ ಎರಡು ಟೋಯಿಂಗ್ ವಾಹನಗಳು ನೀಡಲಿದ್ದು, ಪ್ರತಿ ತಂಡದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಒಬ್ಬ ಕಾನ್‌ಸ್ಟೇಬಲ್ ಮತ್ತು ನಾಲ್ಕು ಜಿಬಿಎ ಸಿಬ್ಬಂದಿ ನೇಮಕಗೊಂಡಿದ್ದಾರೆ. ಟೋಯಿಂಗ್ ವಾಹನಗಳಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಯಾವುದೇ ಗಲಾಟೆ ಅಥವಾ ಅವಘಡವನ್ನು ದಾಖಲು ಮಾಡಲಾಗುತ್ತದೆ.
ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್ ಇರುವ ರಸ್ತೆಗಳು ಮತ್ತು ನೋ ಪಾರ್ಕಿಂಗ್ ಜಾಗಗಳು ಟೋಯಿಂಗ್ ಕಾರ್ಯಾಚರಣೆಯ ಕೇಂದ್ರವಾಗಿವೆ. ಹಿರಿಯ ಅಧಿಕಾರಿಗಳು ಸಿಬ್ಬಂದಿಯ ವರ್ತನೆ ಮೇಲೂ ಕಣ್ಣಿಡಲಿದ್ದಾರೆ.



