ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಭಾವೈಕ್ಯತೆಯ ಮಠವಾಗಿರುವ ಶಿರಹಟ್ಟಿಯ ಫಕ್ಕೀರೇಶ್ವರ ಮಠದ ಜಾತ್ರೆಗೆ ಇಲ್ಲಿಯ ಶಾಖಾ ಮಠದಿಂದ ತೆರಳುವ ರೈತರ 75 ಟ್ರ್ಯಾಕ್ಟರ್ ಯಾತ್ರೆಗೆ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿಗಳು ಚಾಲನೆ ನೀಡಿದರು.
ಇಲ್ಲಿಯ ಫಕ್ಕೀರೇಶ್ವರ ಮಠದ ಆವರಣದಲ್ಲಿ ಟ್ರ್ಯಾಕ್ಟರಿಗೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದ ಶ್ರೀಗಳು ಮಾತನಾಡಿ, ಈ ನಾಡಿನ ಕೋಮು ಸೌಹಾರ್ದತೆಗೆ ಹೆಸರಾಗಿರುವ ಶಿರಹಟ್ಟಿ ಫಕ್ಕೀರೇಶ್ವರ ಮಠದ ಜಾತ್ರೆಯು ವಿಶೇಷವಾಗಿದೆ. ಮಠದ 13ನೇ ಪಟ್ಟಾಧ್ಯಕ್ಷರಾದ ಸಿದ್ಧರಾಮ ಸ್ವಾಮೀಜಿಗಳಿಗೆ 75 ಸವಂತ್ಸರಗಳು ತುಂಬಿದ ಪ್ರಯುಕ್ತ ಇಲ್ಲಿಯ ಭಕ್ತರು 75 ಟ್ರ್ಯಾಕ್ಟರಿಗೆ ಮೂಲಕ ಆಶಿರ್ವಾದ ಪಡೆಯಲು ತೆರಳುತ್ತಿರುವುದು ಸ್ವಾಗತಾರ್ಹವಾಗಿದೆ. ಶ್ರೀಗಳಿಗೆ ದೇವರು ಆರೋಗ್ಯ ಭಾಗ್ಯವನ್ನು ಕರುಣಿಸಲೆಂದು ಇಂದು ಮುಂಜಾನೆ ಇಲ್ಲಿಯ ಶಾಖಾ ಮಠದಲ್ಲಿ ರುದ್ರಾಭಿಷೇಕ ನೆರವೇರಿಸಿ ಅನ್ನ ಸಂತರ್ಪಣೆಯನ್ನು ಮಾಡಿದ ಭಕ್ತರ ಕಾರ್ಯ ಸ್ಮರಣೀಯ ಎಂದರು.
ಫಕ್ಕೀರೇಶ್ವರ ಶಾಖಾ ಮಠದ ಸಂಚಾಲಕ ಅಮೃತ ಮಂಟೂರು ಸೇರಿದಂತೆ ರೈತ ಭಕ್ತರು ಹಾಜರಿದ್ದರು.