ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಿಂಗಾರಿನ ಅತಿವೃಷ್ಟಿ, ಬೆಳೆಹಾನಿ ಸಂಕಷ್ಟದ ನಡುವೆಯೂ ನಾಡಿನ ದೊಡ್ಡ ಹಬ್ಬ ದೀಪಾವಳಿಯನ್ನು ಸಂಪ್ರದಾಯಬದ್ಧವಾಗಿ ಸಡಗರ ಸಂಭ್ರಮದಿಂದಲೇ ಆಚರಿಸಿದ್ದು ತಾಲೂಕಿನಾದ್ಯಂತ ಕಂಡು ಬಂದಿತು.
ಮಂಗಳವಾರದಿಂದಲೇ ಹಬ್ಬದ ಸಂಪ್ರದಾಯ ಪ್ರಾರಂಭವಾಗಿ, ಶುಕ್ರವಾರ ನರಕ ಚತುರ್ದಶಿಯಂದು ಬೆಳಿಗ್ಗೆ ಅಭ್ಯಂಜನ ಸ್ನಾನ, ಸಂಜೆ ಅಮವಾಸ್ಯೆ, ವಾಹನಪೂಜೆ, ಅಂಗಡಿ ಮುಂಗಟ್ಟುಗಲ್ಲಿ ಧನಲಕ್ಷ್ಮೀ ಪೂಜೆ ಸಲ್ಲಿಸಿದರು.
ಶನಿವಾರ ದೀಪಾವಳಿ ಪಾಡ್ಯ ಆಚರಣೆಗೆ ಎಲ್ಲರ ಮನೆ ಮತ್ತು ಅಂಗಡಿಗಳಲ್ಲಿ ಧನಲಕ್ಷ್ಮೀ ಪೂಜೆ ಮತ್ತು ವಾಹನಗಳಿಗೆ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಮತ್ತು ಹಟ್ಟಿ ಪೂಜೆಗೆ ಸಕಲ ಸಿದ್ಧತೆಯೊಂದಿಗೆ ಸಂಭ್ರಮದಲ್ಲಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಬಾಳೆ ಹಣ್ಣು, ಸೇಬು ಹಣ್ಣು, ದಾಳಿಂಬೆ, ತೆಂಗಿನಕಾಯಿ, ಚೆಂಡುಹೂವು, ಸೇವಂತಿಗೆ, ಮಲ್ಲಿಗೆ, ಸುಗಂಧರಾಜ ಹೂವುಗಳಿಗೆ ಬೇಡಿಕೆ ಹೆಚ್ಚಿ ಬೆಲೆಯೂ ಏರಿಕೆಯಾಗಿದ್ದರೂ ಎಲ್ಲೆಡೆ ತಳಿರು ತೋರಣ, ಹೂವು-ಹಣ್ಣು, ಅಲಂಕಾರಿಕ ವಸ್ತುಗಳು, ಆಕಾಶಬುಟ್ಟಿ, ಪಟಾಕಿ, ದಿನಸಿ, ಬಟ್ಟೆ, ಆಭರಣ, ವಾಹನಗಳ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆಯಿತು. ಪೂಜಾ ಸಾಮಗ್ರಿಗಳು, ಪಟಾಕಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.
ಮಣ್ಣಿನ ಹಣತೆಯ ಬದಲಿಗೆ ಚಿತ್ತಾಕರ್ಷಕ ಸೆರಾಮಿಕ್ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಮುಂಗಾರು-ಹಿಂಗಾರಿನ ಬರದ ನಡುವೆಯೂ ದೀಪಾವಳಿ ಹಬ್ಬದ ಸಡಗರಕ್ಕೇನೂ ಕಮ್ಮಿಯಿಲ್ಲ ಎನ್ನುವಂತಹ ಹಬ್ಬದ ವಾತಾವರಣ ಮನೆ ಮಾಡಿತ್ತು.
ಸಂಜೆ ವೇಳೆ ರೈತರು ತಮ್ಮ ಕೃಷಿ ಉಪಕರಣ, ಟ್ರ್ಯಾಕ್ಟರ್, ಬೈಕ್, ಕಾರು ಸೇರಿದಂತೆ ಇತರೆ ವಾಹನಗಳಿಗೆ ತಳಿರು-ತೋರಣ ಕಟ್ಟಿ ನೆರೆಹೊರೆಯವರನ್ನು ಕರೆದು ಮುತ್ತೈದೆಯರಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.
ಹಬ್ಬದ ವ್ಯಾಪಾರಕ್ಕೆ ಪಟ್ಟಣ ಸೇರಿ ಸುತ್ತಲಿನ ನೂರಾರು ಗ್ರಾಮಗಳ ಜನರು ಬರುವುದರಿಂದ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿತ್ತು. ಟ್ರಾಫಿಕ್ ಕಿರಿಕಿರಿ ತಪ್ಪಿಸುವಲ್ಲಿ ಪೊಲೀಸರು ಹರಸಾಹಸದ ನಡುವೆ ಜನಸಾಮಾನ್ಯರೂ ಪರದಾಡಬೇಕಾಯಿತು. ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಪೊಲೀಸರು ಮತ್ತು ಪುರಸಭೆಗೆ ಸಾರ್ವಜನಿಕರು ಒತ್ತಡ ಹಾಕಿದ್ದರಿಂದ ಮುಖ್ಯ ಬಜಾರ್ ರಸ್ತೆಯ ಸೋಮೇಶ್ವರ ಪಾದಗಟ್ಟಿಯಿಂದ ಹಾವಳಿ ಆಂಜನೇಯ ದೇವಸ್ಥಾನದವರೆಗಿನ ರಸ್ತೆಯಲ್ಲಿ ಬೈಕ್ ಸೇರಿ ಕಾರ್, ಅಟೋ ಸಂಚಾರ ಸಂಪೂರ್ಣ ನಿರ್ಬಂಧಿಸಿ, ಬಾಳೆ-ಕಬ್ಬು, ತಳಿರು ತೋರಣಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಿದ್ದರಿಂದ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಿದಂತಾಗಿ ಜನತೆ ಮತ್ತು ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟರು.