ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣದ ಪವಿತ್ರ ಕಾಲದಲ್ಲಿ ನಡೆಯುವ ಮಹಾತ್ಮರು, ಶರಣರು, ಸಂತರು, ಪುಣ್ಯ ಪುರುಷರ ಪುರಾಣ ಪ್ರವಚನಗಳು, ಸತ್ಸಂಗ, ಧರ್ಮ ಕಾರ್ಯಗಳು, ಹಬ್ಬಗಳ ಸಂಪ್ರದಾಯಗಳು ಎಲ್ಲರನ್ನೂ ಸನ್ಮಾರ್ಗದತ್ತ ಸಾಗಿಸಿ ಶಾಂತಿ, ನೆಮ್ಮದಿ, ಸಮೃದ್ಧಿ ಕೊಡುತ್ತವೆ ಎಂದು ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಹೇಳಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ಪುರಾಣ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯದ ಬದುಕಿನ ಜಂಜಾಟದ ನಡುವೆ ಧರ್ಮಕಾರ್ಯ, ಸತ್ಸಂಗ, ಪುರಾಣ-ಪುಣ್ಯಕಥೆ ಆಲಿಸುವುದರಿಂದ ಸಾರ್ಥಕ ಬದುಕಿನ ಮಾರ್ಗ ತೆರೆದುಕೊಳ್ಳುತ್ತದೆ ಎಂದರು.
ಜೀವನದುದ್ದಕ್ಕೂ ಧರ್ಮ ಜಾಗೃತಿ, ಸಂಸ್ಕೃತಿ, ಸಮನ್ವಯತೆ, ಸತ್ಯ, ನ್ಯಾಯ, ನೀತಿ, ಧರ್ಮ ಹೀಗೆ ಲೋಕಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹಾತ್ಮರ ಚಿಂತನೆ, ಆದರ್ಶ, ಮೌಲ್ಯಗಳು ಇಂದಿಗೂ ಸಮಾಜಕ್ಕೆ ಬೆಳಕಾಗಿವೆ. ಮಾನವ ಜೀವನದ ನಂತರವೂ ಸಮಾಜ ಸ್ಮರಿಸುವ ಶ್ರೇಷ್ಠ ಬದುಕು ರೂಪಗೊಳ್ಳಲು ಸಜ್ಜನರ ಸಹವಾಸ, ಶ್ರೇಷ್ಠರ ಆಚಾರ-ವಿಚಾರಗಳು, ಧರ್ಮದ ಸಂಸ್ಕಾರ ಮನುಷ್ಯನಿಗೆ ಅಗತ್ಯ ಅಂತಹ ವಾತಾವರಣ ಕಲ್ಪಿಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ರೈತ ಸಮುದಾಯದವರಿಂದ ಇಂದಿಗೂ ಪುರಾಣ, ಪ್ರವಚನ, ಭಜನೆ, ಜಾನಪದ ಸಂಪ್ರದಾಯಗಳು ನಡೆಯುತ್ತಿರುವುದು ಪ್ರಶಂಸನೀಯ ಎಂದರು.
ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಗುರಣ್ಣ ಪಾಟೀಲ ಕುಲಕರ್ಣಿ, ಬಸವೇಶ ಮಹಾಂತಶೆಟ್ಟರ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಶಂಕರ ಬಾಳಿಕಾಯಿ, ನಾಗರಾಜ ಕಳಸಾಪುರ, ವಿರೂಪಾಕ್ಷ ಆದಿ, ಸಿದ್ದನಗೌಡ ಬಳ್ಳೊಳ್ಳಿ, ಮಯೂರ ಪಾಟೀಲ, ನಂದೀಶ ಬಂಡಿವಾಡ, ಶಿವಪುತ್ರಪ್ಪ ಚಾಕಲಬ್ಬಿ, ನೀಲಪ್ಪ ಕರ್ಜೆಕಣ್ಣವರ, ಅಶೋಕ ಸಾತಣ್ಣವರ, ಅರ್ಚಕ ಸಮೀರ ಪೂಜಾರ, ಬಸವರಾಜ ಮೆಣಸಿನಕಾಯಿ ಮುಂತಾದವರಿದ್ದರು.
ಜಯಪ್ರಕಾಶ ಹೊಟ್ಟಿ, ಸೋಮಶೇಖರ ಕೆರಿಮನಿ, ಜಿ.ಎಸ್. ಗುಡಗೇರಿ ನಿರ್ವಹಿಸಿದರು. ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಪಂ. ಗುರುಮಹಾಂತಯ್ಯ ಶಾಸ್ತ್ರೀ ಆರಾಧ್ಯಮಠ ಗವಾಯಿಗಳು ಪುರಾಣ ಪಠಣ-ಪ್ರವಚನಗೈದರೆ, ವಿಜಯಕುಮಾರ ಸುತಾರ ತಬಲಾ ಸಾಥ್ ನೀಡಿದರು.