ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಇಂದು ಸಂಚಾರ ನಿರ್ಬಂಧಿಸಲಾಗಿದೆ.
ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದಿಗೆ ಗಣೇಶನನ್ನು ಕೂರಿಸಿ ಐದು ದಿನವಾಗಿದೆ. ಹಲವೆಡೆ ಇಂದೇ ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ. ಹೀಗಾಗಿ ಮಧ್ಯಾಹ್ನ 1 ರಿಂದ ರಾತ್ರಿ 10 ಗಂಟೆ ವರೆಗೆ ನಗರದ ಕೆಲ ಪ್ರದೇಶಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಈ ಕುರಿತಾಗಿ ಬೆಂಗಳೂರು ಸಿಟಿಮಾರ್ಕೆಟ್ ಸಂಚಾರ ಪೊಲೀಸ್ ಠಾಣಾದಿಂದ ಟ್ವೀಟ್ ಮಾಡಲಾಗಿದೆ. ಆಗಸ್ಟ್ 31 ರಂದು ಗಣೇಶ ಹಬ್ಬದ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನದ ಮೇಲೆ ಕೂರಿಸಿಕೊಂಡು ಮೆರವಣಿಗೆ ಮೂಲಕ ಹಲಸೂರು ಕೆರೆಗೆ ತೆರಳಲಿದ್ದಾರೆ. ಆ ವೇಳೆಯಲ್ಲಿ ಬಿ.ವಿ.ಕೆ ಅಯ್ಯಂಗಾರ ರಸ್ತೆ, ಚಿಕ್ಕಪೇಟೆ ಮುಖ್ಯ ರಸ್ತೆ, ಕೆ.ವಿ ದೇವಸ್ಥಾನ ರಸ್ತೆ, ಸುಲ್ತಾನಪೇಟೆ ಮುಖ್ಯ ರಸ್ತೆ, ಅಕ್ಕಿಪೇಟೆ ಮುಖ್ಯ ರಸ್ತೆಗಳಲ್ಲಿ, ಓಟಿಸಿ ರಸ್ತೆ, ಬಳೇಪೇಟೆ ಮುಖ್ಯ ರಸ್ತೆ, ಆರ್.ಟಿ ಸ್ಟ್ರೀಟ್, ಅವೆನ್ಯೂ ರಸ್ತೆ, ಕಿಲಾರಿ ರಸ್ತೆ, ಹಾಸ್ಪಿಟಲ್ ರಸ್ತೆ ಮತ್ತು ಕಬ್ಬನಪೇಟ್ ಮುಖ್ಯ ರಸ್ತೆಗಳಲ್ಲಿ ಹೆಚ್ಚು ವಾಹನ ಸಂಚಾರವಿರುತ್ತದೆ. ಹೀಗಾಗಿ ವಾಹನ ಸವಾರರು ಮೆರವಣಿಗೆ ಸಮಯದಲ್ಲಿ ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳನ್ನು ಉಪಯೋಗಿಸುವಂತೆ ಕೋರಿದ್ದಾರೆ.
ಪರ್ಯಾಯ ಮಾರ್ಗಗಳು:
# ಮೆರವಣಿಗೆ ಪ್ರಾರಂಭವಾದ ನಂತರ ಚಿಕ್ಕಪೇಟೆ ಮುಖ್ಯರಸ್ತೆ ಮಾರ್ಗವಾಗಿ ಸಾಗಿ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಸಂಪರ್ಕಿಸಬೇಕಾದ ವಾಹನಗಳು ಅವೆನ್ಯೂ ರಸ್ತೆಯಲ್ಲಿ ಮುಂದುವರೆದು ಮೈಸೂರು ಬ್ಯಾಂಕ್ ವೃತ್ತ ಮಾರ್ಗವಾಗಿ ಕೆ.ಜಿ ರಸ್ತೆಯನ್ನು ಸಂಪರ್ಕಿಸಿ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಸೇರಬಹುದು.
# ಮೆರವಣಿಗೆ ಓಟಿಸಿ ರಸ್ತೆಯನ್ನು ಪ್ರವೇಶಿಸಿದ ನಂತರ ಓಟಿಸಿ ರಸ್ತೆ ಮಾರ್ಗವಾಗಿ ಬಳೆಪೇಟೆ ಮುಖ್ಯರಸ್ತೆಗೆ ಸಂಪರ್ಕಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು. ಆರ್ ಟಿ ಸ್ಪೀಟ್ ರಸ್ತೆ ಮುಖಾಂತರ ಬಳೆಪೇಟೆ ಮುಖ್ಯ ರಸ್ತೆಯನ್ನು ಸಂಪರ್ಕಿಸಬಹುದು.
# ಮೆರವಣಿಗೆಯು ಕೆವಿ ಟೆಂಪಲ್ ಸ್ಟ್ರೀಟ್ ಪ್ರವೇಶಿಸಿ ಆರ್.ಸ್ಟೀಟ್ ರಸ್ತೆಯನ್ನು ಸೇರುವವರೆಗೆ ಸುಲ್ತಾನ್ ಪೇಟೆ ರಸ್ತೆಯನ್ನು ಮುಚ್ಚಿ (ಎ.ಎಸ್ ಚಾರ್ ಸ್ಟ್ರೀಟ್ ಜಂಕ್ಷನ್‌ನಲ್ಲಿ ಮಾರ್ಗ ಬದಲಾವಣೆ ಮಾಡಲಾಗುವುದು.) ಸದರಿ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ಮೈಸೂರು ರಸ್ತೆಯಲ್ಲಿ ಮುಂದುವರೆದು ಟೌನ್ ಹಾಲ್ ಮುಖಾಂತರ ಕೆ.ಜಿ ರಸ್ತೆಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.
# ಮೆರವಣಿಗೆ ಬಳೆಪೇಟೆ ಮುಖ್ಯರಸ್ತೆ ಮಾರ್ಗವಾಗಿ ಸಾಗಿ ಆರ್.ಟಿ ಸ್ಟ್ರೀಟ್ ರಸ್ತೆಯನ್ನು ಪ್ರವೇಶಿಸುತ್ತಿದ್ದಂತೆ ಬಿವಿಕೆ ಅಯ್ಯಂಗಾರ್ ರಸ್ತೆ ಕಡೆಯಿಂದ ಬಳೆಪೇಟೆ ಮುಖ್ಯರಸ್ತೆ ಕಡೆಗೆ ಸಂಚರಿಸುವ ಮಾರ್ಗವಾದ ಆರ್.ಟಿ ಸ್ಪೀಟ್ ರಸ್ತೆಯನ್ನು ಮುಚ್ಚಲಾಗುವುದು. ಸದರಿ ರಸ್ತೆಯ ಮಾರ್ಗವಾಗಿ ಸಾಗಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಕೆ.ಜಿ ರಸ್ತೆ ಮುಖಾಂತರ ಸಂಚರಿಸುವುದು.
ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ದಾಟಿ ಆರ್ ಟಿ ಸ್ಟ್ರೀಟ್ ರಸ್ತೆಯನ್ನು ಮೆರವಣಿಗೆ ಪ್ರವೇಶಿಸುತ್ತಿದ್ದಂತೆ ಅವೆನ್ಯೂ ರಸ್ತೆ ಕಡೆಗೆ ಆರ್ ಟಿ ಸ್ಟ್ರೀಟ್ ರಸ್ತೆಯನ್ನು ಮುಚ್ಚಲಾಗುವುದು. ಸದರಿ ರಸ್ತೆಯ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಸಾಗರ್ ಜಂಕ್ಷನ್ ನಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಕೆ.ಜಿ ರಸ್ತೆಯಲ್ಲಿ ಮುಂದುವರೆದು ಕಾಟನ್ ಪೇಟೆ ಮುಖ್ಯರಸ್ತೆ ಮಾರ್ಗವಾಗಿ ಮೈಸೂರು ರಸ್ತೆಯನ್ನು ಸಂಪರ್ಕಿಸಬಹುದು.