ದೊಡ್ಡಬಳ್ಳಾಪುರ:- ನಗರದ ಹೊರವಲಯದಲ್ಲಿರುವ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ಏಕಾಏಕಿ ಪಟಾಕಿ ಸ್ಫೋಟಗೊಂಡು ಓರ್ವ ಬಾಲಕ ಸಾವನಪ್ಪಿರುವ ಘಟನೆ ಜರುಗಿದೆ.
15 ವರ್ಷದ ತನುಷ್ ರಾವ್ ಮೃತ ಬಾಲಕ. ಇಂದು ಸಂಜೆ ಗಣೇಶ ವಿಸರ್ಜನೆ ವೇಳೆ ಪಟಾಕಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 15 ವರ್ಷದ ತನುಷ್ ರಾವ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ವಿದ್ಯಾರ್ಥಿಗಳಾದ ಗಣೇಶ್, ಯೋಗೇಶ್, ಚಾಲಕ ಮುನಿರಾಜು, ನಾಗರಾಜು, ಚೇತನ್ ಶಾವಿ ಎಂಬುವರಿಗೆ ಸುಟ್ಟ ಗಾಯಗಳಾಗಿವೆ. ಇದೇ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಜಾಕಿರ್ ಹುಸೇನ್ ಎಂಬುವರ ಕೈಗೆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.
ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಂದಹಾಗೆ ಇಂದು ಸಂಜೆ 5.30ರ ವೇಳೆ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ವಿಸರ್ಜನೆಗೆಂದು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಬರುವ ವೇಳೆ, ಮೆರವಣಿಗೆ ಮಾಡಲು ಕರೆಸಲಾಗಿದ್ದ ಪವರ್ ಲಿಪ್ಟರ್ ವಾಹನ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳು ಏಕಾಏಕಿ ಸ್ಪೋಟಗೊಂಡು ದುರಂತ ಸಂಭವಿಸಿದೆ.
ಸ್ಥಳಕ್ಕೆ ಎಸ್ಪಿ ಸಿಕೆ ಬಾಬಾ, ಎಎಸ್ಪಿ ನಾಗರಾಜ್, ಡಿವೈಎಸ್ಪಿ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.