ಮಂಡ್ಯ: ಆಸ್ತಿ ವಿಚಾರವಾಗಿ ಸಹೋದರರ ನಡುವೆ ಉಂಟಾದ ಜಗಳ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.
ಯೋಗೇಶ್ (35) ಎಂಬವರು ಈ ಹತ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಯೋಗೇಶ್ನ ಅಣ್ಣ ಲಿಂಗರಾಜ ಹಾಗೂ ಅಣ್ಣನ ಮಕ್ಕಳಾದ ಭರತ್ ಮತ್ತು ದರ್ಶನ್ ಅವರು ಹರಿತವಾದ ಆಯುಧಗಳಿಂದ ಯೋಗೇಶ್ನ್ನು ಮನೆಯ ಕೊಟ್ಟಿಗೆಯಲ್ಲೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯೋಗೇಶ್ನ ಮದುವೆ ಕೆಲವೇ ದಿನದಲ್ಲಿ ನಿಶ್ಚಯವಾಗಿದ್ದರಿಂದ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುವಾಗಲೇ ಈ ದುರ್ಘಟನೆ ಸಂಭವಿಸಿರುವುದು ಮನಕಲಕುವಂತಾಗಿದೆ.
ಆಸ್ತಿಯ ಹಂಚಿಕೆ ವಿಚಾರವಾಗಿ ಸಹೋದರರ ನಡುವೆ ಹಿಂದಿನಿಂದಲೂ ಆಗಾಗ್ಗೆ ಕಲಹ ನಡೆಯುತ್ತಿತ್ತು. ಇಂದು ಬೆಳಿಗ್ಗೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆ ನಡೆದ ಬಳಿಕ ಆರೋಪಿಗಳಾದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಕುರಿತು ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.



