ರಾಯಚೂರು: KSRTC ಬಸ್ ಹರಿದು ನಾಲ್ಕು ವರ್ಷದ ಕಂದಮ್ಮ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಸಂಭವಿಸಿದೆ.
ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಮೃತ ಬಾಲಕಿ. ಗೂಗಲ್‌ನಿಂದ ದೇವದುರ್ಗದ ಕಡೆಗೆ ಸಾಗುತ್ತಿದ್ದ ಸಾರಿಗೆ ಬಸ್, ಅಚಾನಕ್ ರಸ್ತೆಗೆ ಅಡ್ಡ ಬಂದ ಮಗುವಿನ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ಬಸ್ ಬರುವುದನ್ನು ಗಮನಿಸದೆ ಮಗು ರಸ್ತೆ ದಾಟಲು ಮುಂದಾದಾಗ ಅಪಘಾತ ಸಂಭವಿಸಿದ್ದು, ತಕ್ಷಣವೇ ಬಸ್ಸಿನ ಚಕ್ರದಡಿಗೆ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಈ ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



