ಬೆಂಗಳೂರು: ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಆತಂಕದ ಘಟನೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿತು.
ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಹರಗಯ್ಯ ಎಂಬುವವರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯ ಒಂದು ಗಂಟೆ ಮುನ್ನವೇ ಹೊಸ ಎಲ್ಪಿಜಿ ಸಿಲಿಂಡರ್ ತಂದು ಜೋಡಿಸಲಾಗಿತ್ತು. ಅದನ್ನು ಅಳವಡಿಸುವ ವೇಳೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸಿದ ಕ್ಷಣದಲ್ಲೇ ಮನೆಯವರು ಹೊರಗೆ ಓಡಿಬಂದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಹರಗಯ್ಯ ಅವರ ಪತ್ನಿ ಭಾಗ್ಯಮ್ಮ ಸೇರಿದಂತೆ ಐವರು ಕುಟುಂಬ ಸದಸ್ಯರು ಮನೆಯಲ್ಲಿ ವಾಸವಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.
ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.



