ವಿಜಯಸಾಕ್ಷಿ ಸುದ್ದಿ, ಗದಗ : ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಹಾಗೂ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ `ಗ್ರಾಮೀಣ ಯುವಕರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಉದ್ಯಮಶೀಲತೆ ಅವಕಾಶಗಳು’ ಕುರಿತು ತರಬೇತಿ ಕಾರ್ಯಕ್ರಮವನ್ನು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ವಿಜ್ಞಾನಿ ಡಾ. ಮಂಜೇಶ ಜಿ.ಎನ್, ಆಹಾರ ಉತ್ಪಾದನೆಯಲ್ಲಿ ಕ್ಷೇತ್ರ ಬೆಳೆಗಳಿಗೆ ಹೋಲಿಸಿದರೆ ತೋಟಗಾರಿಕೆ ಬೆಳೆಗಳ ಪಾತ್ರ ಮಹತ್ವದಾಗಿದ್ದು, ಯುವಕರು ತೋಟಗಾರಿಕಾ ಕೌಶಲ್ಯಗಳಾದ ಕಸಿ ಕಟ್ಟುವುದು, ಚಾಟನಿ ಮಾಡುವುದು, ಗಾರ್ಡನ್ ನಿರ್ವಹಣೆ, ತೋಟದ ನಿರ್ವಹಣೆ ಮುಂತಾದವುಗಳನ್ನು ಕಲಿತರೆ ಸ್ವಂತ ಉದ್ಯೋಗ ಸ್ಥಾಪಿಸುವುದು ಸರಳವಾಗುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಡಾ. ವೀಣಾ ಜಿ.ಎಲ್. ಗೋಡಂಬಿ ಹಣ್ಣಿನ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಸ್ವ-ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಲಹೆಗಾರ ಡಾ. ಎಲ್. ಜಿ. ಹಿರೇಗೌಡರ್ ಮಾತನಾಡಿ, ಗದಗ ಜಿಲ್ಲೆಯ ಮಳೆಯಾಶ್ರಿತ ಕೆಂಪು ಜಮೀನುಗಳಲ್ಲಿ ಗೋಡಂಬಿ ಬೆಳೆ ಉತ್ತಮವಾಗಿ ಬೆಳೆದು ಇಳುವರಿಯನ್ನು ಕೊಡುತ್ತಿದೆ. ಗದಗ ಜಿಲ್ಲೆಯಲ್ಲಿ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿಯನ್ನು ಬೆಳೆಯುತ್ತಿದ್ದು, ಇದಕ್ಕೆ ಸಹಾಯ ಮಾಡಿದ ಗೋಡಂಬಿ ಮತ್ತು ಕೊಕೊ ನಿರ್ದೇಶನಾಲಯ ಕೊಚ್ಚಿನ್ ಹಾಗೂ ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಇವರಿಗೆ ಧನ್ಯವಾದಗಳನ್ನು ತಿಳಿಸಿದರು.
ಹೇಮಾವತಿ ಹಿರೇಗೌಡರ್ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ವಿನಾಯಕ ನಿರಂಜನ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಚ್. ಭಂಡಿ ವಂದಿಸಿದರು. 25 ಜನ ಪರಿಶಿಷ್ಟ ಜಾತಿಯ ಯುವಕರು ಈ ತರಬೇತಿಯಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು. ತರಬೇತಿಯ ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಉದ್ಘಾಟನೆಯ ನಂತರ 3 ದಿನಗಳ ಕಾಲ ತೋಟಗಾರಿಕೆಯಲ್ಲಿ ಉದ್ಯಮಶೀಲತೆ ಕುರಿತು ತಾಂತ್ರಿಕ ಅಧಿವೇಶನಗಳಲ್ಲಿ ಮಾಹಿತಿಯನ್ನು ನೀಡಲಾಯಿತು. ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕುಂಬಾಪುರ ಫಾರ್ಮ್, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹೈ-ಟೆಕ್ ಹಾರ್ಟಿಕಲ್ಚರ್ ಯುನಿಟ್ ಹಾಗೂ ಸಂರಕ್ಷಿತ ಕೃಷಿ ಪ್ರಾತ್ಯಕ್ಷಿಕೆ ಘಟಕಗಳಿಗೆ ಮತ್ತು ಕೃಷಿ ವಿಜ್ಞಾನ ಕೇಂದ್ರ, ಧಾರವಾಡದ ಹಣ್ಣಿನ ನರ್ಸರಿಗೆ ಕ್ಷೇತ್ರ ಭೆಟ್ಟಿಗಳನ್ನು ಏರ್ಪಡಿಸಲಾಯಿತು.