ಹಲ್ಲೆ ನಡೆಸಿದ ಅಧಿಕಾರಿಯನ್ನು ವರ್ಗಾವಣೆ ಮಾಡಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ಎನ್ನಲಾದ ವ್ಯಕ್ತಿಯೋರ್ವನಿಗೆ ಅರೆಬೆತ್ತಲೆ ಮಾಡಿ ಪಿಎಸ್‌ಐ ಈರಪ್ಪ ರಿತ್ತಿ ಮತ್ತು ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಬೆಂಬಲಿಗರು ಮಂಗಳವಾರ ರಾತ್ರಿ ಶಿರಹಟ್ಟಿ ಪೊಲೀಸ್ ಠಾಣೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಕಳೆದ ಭಾನುವಾರ ಸೋಮೇಶ ಲಮಾಣಿ ಎಂಬಾತನ ಪತ್ನಿ ಗಂಗವ್ವ ಲಮಾಣಿ ಹಾಗೂ ಬಂಜಾರ ಸಮಾಜದ ಮುಖಂಡರು ದೂರು ನೀಡಲು ಬಂದರೂ ದೂರು ಸ್ವೀಕರಿಸದೇ ಕಳಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ. ಇಸ್ಪೀಟ್ ಆಡದೇ ಇರುವ ವ್ಯಕ್ತಿಗೆ ಅರೆಬೆತ್ತಲೆ ಮಾಡಿ ಪಿಎಸ್‌ಐ ಮತ್ತು ಸಿಬ್ಬಂದಿ ಹೊಡೆದಿರುವುದು ಖಂಡನೀಯ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಆದ್ದರಿಂದ ಇವರನ್ನು ನಮ್ಮ ಮೂರು ತಾಲೂಕು ಬಿಟ್ಟುಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದರು.

ಅಹೋರಾತ್ರಿ ಪ್ರತಿಭಟನೆಗೆ ಮುಂದಾದ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಧ್ಯರಾತ್ರಿ 1 ಗಂಟೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನನ್ನು ಭೇಟಿಯಾಗಿ ಪುನಃ ಬಂದು ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಶಾಸಕ ಡಾ. ಲಮಾಣಿ ಪಟ್ಟು ಹಿಡಿದರು.

ಇದಕ್ಕೆ ಸ್ಪಂದಿಸಿದ ಎಸ್‌ಪಿ ರೋಹನ್ ಜಗದೀಶ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಆತನ ಆರೋಗ್ಯ ವಿಚಾರಿಸಿ ಮರಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಈಗಾಗಲೇ ಈ ಕುರಿತು ಆತನ ಪತ್ನಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆಯು ಡಿಎಸ್‌ಪಿ ಹಂತದಲ್ಲಿ ಆಗಲಿದೆ. ತದನಂತರ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದಕ್ಕೆ ಪ್ರತಿಭಟನಾಕಾರರು ಒಪ್ಪದಿದ್ದಾಗ, ಸೂಕ್ತ ಬಂದೋಬಸ್ತು ಕಲ್ಪಿಸಬೇಕೆಂದು ಸಿಬ್ಬಂದಿಗೆ ಸೂಚಿಸಿ ತೆರಳಿದರು.

ಪ್ರತಿಭಟನೆಯಲ್ಲಿ ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಶಂಕರ ಮರಾಠೆ, ಪುಂಡಲೀಕ ಲಮಾಣಿ, ಪರಶುರಾಮ ಡೊಂಕಬಳ್ಳಿ, ವೀರಣ್ಣ ಅಂಗಡಿ, ರಾಮಣ್ಣ ಕಂಬಳಿ, ಫಕ್ಕೀರೇಶ ಕರಿಗಾರ, ಶ್ರೀನಿವಾಸ ಬಾರಬಾರ, ಸಂತೋಷ ತೋಡೆಕಾರ, ಅಪ್ಪಣ್ಣ ಕುಬೇರ, ವಿಠ್ಠಲ ಬಿಢವೆ, ಅಕ್ಬರಸಾಬ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.

ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ ಡಿಎಸ್‌ಪಿ ಮುರ್ತುಜಾ ಖಾದ್ರಿ ಸ್ಥಳಕ್ಕೆ ಆಗಮಿಸಿ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಅವರ ಬೆಂಬಲಿಗರ ಮನವೊಲಿಸಲು ಪ್ರಯತ್ನ ನಡೆಸಿದರು. ನಂತರ ಹಲ್ಲೆಗೆ ಒಳಗಾದ ವ್ಯಕ್ತಿಯ ಪತ್ನಿ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಜಾತ್ಯಾತೀತವಾಗಿ ಪ್ರಕರಣ ದಾಖಲಿಸಿದರು.


Spread the love

LEAVE A REPLY

Please enter your comment!
Please enter your name here