ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಅವರ ಅಮಾನತ್ತು ಇಲ್ಲವೇ ವರ್ಗಾವಣೆಗೆ ಆಗ್ರಹಿಸಿ ಕಳೆದ 11 ದಿನಗಳಿಂದ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಸಂಘಟನೆಯವರು ನಡೆಸುತ್ತಿರುವ ಹೋರಾಟ ಶನಿವಾರ ತಾರ್ಕಿಕ ಅಂತ್ಯ ಕಂಡಿತು.
ಅ.12ರಂದು ದಸರಾ ಹಬ್ಬದ ದುರ್ಗಾದೇವಿ ಮೆರವಣಿಗೆ ದಿನ ಮುಸ್ಲಿಂ ಯುವಕರು ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆಂದು ಮರುದಿನ ಗೋಸಾವಿ ಸಮಾಜದವರು ಠಾಣೆಗೆ ದೂರು ಕೊಡಲು ಹೋದಾಗ ಅವರ ಮೇಲೆಯೇ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಹಾರ ಮಾಡಿದ್ದಾರೆಂದು ಆರೋಪಿಸಿ ಅ.19ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿ ಪಿಎಸ್‌ಐ ಅಮಾನತ್ತಿಗೆ ಆಗ್ರಹಿಸಲಾಗಿತ್ತು. ಇಷ್ಟಾಗಿಯೂ ಪಿಎಸ್‌ಐ ಮೇಲೆ ಯಾವುದೇ ಕ್ರಮವಾಗದ್ದರಿಂದ ಕಳೆದ 11 ದಿನಗಳಿಂದ ತಹಸೀಲ್ದಾರ ಕಚೇರಿಯ ಹೊರಗಡೆ ಅನರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದರು.
ಸತ್ಯಾಗ್ರಹ ನಿರತರಿಗೆ ನೈತಿಕ ಬೆಂಬಲವಾಗಿ ನಿಂತಿದ್ದ ಶ್ರೀರಾಮಸೇನೆ ರಾಜ್ಯ ಪ್ರ. ಕಾರ್ಯದರ್ಶಿ ರಾಜು ಖಾನಪ್ಪನವರ ಶನಿವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ನ್ಯಾಯ ಕೇಳಲು ಹೋದ ಗೋಸಾವಿ ಸಮಾಜದ ಯುವಕರು, ಮಹಿಳೆಯರನ್ನು ಬೈಕ್ ಮೇಲೆ ಬೆನ್ನಟ್ಟಿ ಹೊಡೆದಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ, ನ್ಯಾಯಕ್ಕಾಗಿ ಶ್ರೀರಾಮಸೇನೆ ಕಟಿಬದ್ಧವಾಗಿದ್ದರಿಂದ ಕೊನೆಗೂ ಪಿಎಸ್‌ಐ ದುರ್ನಡತೆಯ ಸತ್ಯ ಅರಿತ ಹಿರಿಯ ಅಧಿಕಾರಿಗಳು ಅವರನ್ನು ವರ್ಗಾವಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಕೆಲ ದಿನಗಳ ನಂತರ ಮತ್ತೆ ಅವರನ್ನು ಇಲ್ಲಿಗೆ ನಿಯೋಜಿಸಿದ್ದೇ ಆದಲ್ಲಿ ಪೊಲೀಸ್ ಠಾಣೆಯ ಮುಂದೆಯೇ ಹೋರಾಟ ನಡೆಸುತ್ತೇವೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪಿಎಸ್‌ಐ ಗೂಂಡಾ ವರ್ತನೆ ಖಂಡಿಸಿ ಗೋಸಾವಿ ಸಮಾಜ ಮತ್ತು ಶ್ರೀರಾಮಸೇನೆ ಸಂಘಟನೆಯವರು ನಡೆಸುತ್ತಿರುವ ಹೋರಾಟ ತಡೆಯುವ ನಿಟ್ಟಿನಲ್ಲಿ ಪಿಎಸ್‌ಐ ಅನೇಕ ಷಡ್ಯಂತ್ರ ನಡೆಸಿದರು. ತಾಲೂಕಾಡಳಿತವೂ ಸಹಿತ ಅಧಿಕಾರಿಯನ್ನು ಉಳಿಸಿಕೊಳ್ಳಲು 163 ಕಲಂ ಜಾರಿಗೊಳಿಸಿ ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇಲಾಖೆಯ ಮಾನ ಹರಾಜಾಗುತ್ತಿರುವುದನ್ನು ಮತ್ತು ಹೋರಾಟ ತೀವ್ರ ಸ್ವರೂಪ ಪಡೆಯುವುದನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು ಪಿಎಸ್‌ಐ ವರ್ಗಾವಣೆಗೊಳಿಸಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಶ್ರೀರಾಮಸೇನೆ ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಬಾಳಪ್ಪ ಗೋಸಾವಿ, ಹರೀಶ ಗೋಸಾವಿ, ನವೀಣ ಬೆಳ್ಳಟ್ಟಿ, ಅನಿಲ ಮುಳಗುಂದ, ನೀಲಪ್ಪ ಹತ್ತಿ, ಎಂ.ಆರ್. ಪಾಟೀಲ, ಶಕ್ತಿ ಕತ್ತಿ, ಗಿರೀಶ ಚೌರಟ್ಟಿ ಸೇರಿದಂತೆ ಶ್ರೀರಾಮಸೇನೆ ಕಾರ್ಯಕರ್ತರು, ಗೋಸಾವಿ ಸಮಾಜದವರಿದ್ದರು.
ಲಕ್ಷ್ಮೇಶ್ವರ ಠಾಣೆಗೆ ಎಲ್ಲವನ್ನೂ ಸಮರ್ಥವಾಗಿ, ಸಮಾನವಾಗಿ ನಿಭಾಯಿಸುವ ಓರ್ವ ದಕ್ಷ ಪಿಎಸ್‌ಐ ನಿಯೋಜಿಸಿ. ಮುಖ್ಯವಾಗಿ ಅರ್‌ಟಿಓ ಕಚೇರಿಯಲ್ಲಿರುವಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಾಲ್ಕೈದು ಜನ ಏಜೆಂಟರು ಠಾಣೆಯಲ್ಲಿಯೇ ಬಿಡಾರ ಹೂಡಿ ಪೊಲೀಸರ ಸಂವಿಧಾನ ಮತ್ತು ಕಾನೂನಾತ್ಮಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳ ಗೌರವಕ್ಕೆ ಧಕ್ಕೆಯಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಅವರು ಇದಕ್ಕೆ ಕೂಡಲೇ ಕಡಿವಾಣ ಹಾಕಿಸಬೇಕು.
– ಡಾ. ಚಂದ್ರು ಲಮಾಣಿ.
ಶಾಸಕರು, ಶಿರಹಟ್ಟಿ.