ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಆದೇಶಕ್ಕೆ ಒಪ್ಪಿಕೊಂಡಿದ್ದು, ಹಲವು ತಿಂಗಳ ಹಿಂಬಾಕಿ ಪಾವತಿಗೆ ಮಾರ್ಚ್ 2ರವರೆಗೆ ಗಡುವು ನೀಡಲಾಗಿದೆ.
38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಬಾಕಿ ಹಣ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ವೇತನ ಪರಿಷ್ಕರಣೆಗೂ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೂ 38 ತಿಂಗಳ ಸಂಪೂರ್ಣ ಹಿಂಬಾಕಿ ಹಣ ನೀಡಬೇಕೆಂದು ನೌಕರರು ಆಗ್ರಹಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದ ಸ್ವಾತಂತ್ರ್ಯ ಉದ್ಯಾನ (ಫ್ರೀಡಂಪಾರ್ಕ್) ಸ್ಥಳಕ್ಕೆ ಕೆಎಸ್ಆರ್ಟಿಸಿ ಎಂಡಿ ಭೇಟಿ ನೀಡಿ ನೌಕರರೊಂದಿಗೆ ಚರ್ಚೆ ನಡೆಸಿದರು. ಬಳಿಕ ಜಂಟಿ ಕ್ರಿಯಾ ಸಮಿತಿ ಮುಖಂಡರು ಸಭೆ ನಡೆಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ತೀರ್ಮಾನಿಸಿದರು.
ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ಅವರು, “ಮಾರ್ಚ್ 2ರೊಳಗಾಗಿ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಕೆಲ ಸಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣವೇ ಹೋರಾಟ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಮುಷ್ಕರ ಹಿಂಪಡೆಯಲ್ಪಟ್ಟಿರುವುದರಿಂದ ನಾಳೆಯಿಂದ ರಾಜ್ಯಾದ್ಯಂತ ಬಸ್ಗಳು ಎಂದಿನಂತೆ ಸಂಚರಿಸಲಿವೆ.



