ಬೆಂಗಳೂರು: ಕರ್ನಾಟಕದಲ್ಲಿ ಸಾರಿಗೆ ನೌಕರರು 38 ತಿಂಗಳ ಭತ್ಯೆ ಹಾಗೂ ವೇತನ ಹೆಚ್ಚಳ ಸೇರಿದಂತೆ ಬೇಡಿಕೆಗಳಿಗೆ ಆಗ್ರಹಿಸಿ, ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಈ ಮುಷ್ಕರಕ್ಕೆ ಭಾಗಿಯಾಗಲಿದ್ದಾರೆ.
ಜನವರಿಯಲ್ಲಿ 4 ನಿಗಮದ ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ಸಂಬಳ ಹೆಚ್ಚಳ ನೀಡಬೇಕಾಗಿತ್ತು, ಆದರೆ ಇದುವರೆಗೆ ಸರಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕ್ರಿಯಾ ಸಮಿತಿ ಮುಖಂಡ ಅನಂತ ಸುಬ್ಬರಾವ್ ತಿಳಿಸಿದ್ದಾರೆ.
ಮುಷ್ಕರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಇ–ಮೇಲ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಸುಮಾರು 1 ಲಕ್ಷ 15 ಸಾವಿರ ನೌಕರರನ್ನು ಒಳಗೊಂಡಿರುವ ಈ ಕಾಳಜಿ ಹಂಚಿಕೊಂಡು, ಸರ್ಕಾರದ ನಿರ್ಲಕ್ಷ್ಯಕ್ಕೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



