ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ರಾಜ್ಯದೆಲ್ಲೆಡೆ ಮುಷ್ಕರ ನಡೆಸಿದ್ದರು.
ನೌಕರರು ಕರೆ ಕೊಟ್ಟ ಮುಷ್ಕರಕ್ಕೆ ಎಲ್ಲೆಡೆ ಬೆಂಬಲವೂ ವ್ಯಕ್ತವಾಗಿತ್ತು. ಇದರಿಂದ ಕರ್ನಾಟಕದೆಲ್ಲೆಡೆ ಬಸ್ ಗಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಇನ್ನಿಲ್ಲದ ಪರದಾಟ ನಡೆಸಿದರು. ಅಲ್ಲದೇ ಕೆಲವೆಡೆ ಅವಾಂತರಗಳು ಕೂಡ ನಡೆದವು.
ಇನ್ನೂ ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಆಗಸ್ಟ್ 4 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡುವಂತೆ ಸೂಚನೆ ನೀಡಿತ್ತು. ಆದ್ರೆ, ಸಾರಿಗೆ ಸಂಘಟನೆಗಳು ಹೈಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಮಂಗಳವಾರ ಅನೇಕ ಕಡೆಗಳಲ್ಲಿ ಮುಷ್ಕರ ಮಾಡಿರುವುದರಿಂದ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಸಾರಿಗೆ ಸಂಘಟನೆಗಳು ಮುಷ್ಕರ ವಾಪಾಸ್ ತೆಗೆದುಕೊಂಡಿವೆ.
ಹೈಕೋರ್ಟ್ ಆದೇಶದ ನಡುವೆಯೂ ಮುಷ್ಕರ ಮುಂದುವರಿಸಿದರೆ ಎಸ್ಮಾ ಅಡಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರಕ್ಕೆ ಸಿಜೆ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠ ಸೂಚನೆ ನೀಡಿದ ಬೆನ್ನಲ್ಲೆ ಅಲರ್ಟ್ ಆದ ಸಾರಿಗೆ ನೌಕರರ ಮುಖಂಡರು ಮುಷ್ಕರವನ್ನು ಮುಂದೂಡಿರುವುದಾಗಿ ತಿಳಿಸಿದರು. ಮಾತ್ರವಲ್ಲ, ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ತನ್ನ ನೌಕರರಿಗೆ ಸೂಚನೆ ನೀಡಿದರು.
ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ:
ಹೈಕೋರ್ಟ್ ಅದೇಶದ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿದ ಜಂಟಿ ಕ್ರಿಯಾ ಸಮೀತಿ ಅಧ್ಯಕ್ಷ ಅನಂತ ಸುಬ್ಬರಾವ್, ಸದ್ಯಕ್ಕೆ ಮುಷ್ಕರ ವಾಪಸ್ ತೆಗೆದುಕೊಳ್ಳಲಾಗಿದೆ. ಸಾರಿಗೆ ನೌಕರರು ಈ ಕ್ಷಣದಿಂದಲೇ ಕೆಲಸಕ್ಕೆ ಹಾಜಾರಾಗಿ ಎಂದು ಸೂಚನೆ ನೀಡಿದರು. ಮುಷ್ಕರ ಕೈ ಬಿಟ್ಟಿಲ್ಲ ಸದ್ಯಕ್ಕೆ ಮುಂದೂಡಿದೆ ಎಂದು ಸ್ಪಷ್ಟಪಡಿಸಿದರು.
ಮುಷ್ಕರ ಮುಂದೂಡಿರೋದರಿಂದ ಎಸ್ಮಾ ಕಾಯ್ದೆ ಉಲ್ಲಂಘನೆಯಾಗಲ್ಲ, ಸಿಎಂ ಮಾತುಕತೆಗೆ ಕರೆಯಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು, ಎಲ್ಲರೂ ಕೆಲಸಕ್ಕೆ ಹೋಗಿ ನಿಮ್ಮ ಜೊತೆಗೆ ನಾವು ಇದ್ದೇವೆ ಎಂದು ಹೇಳಿದರು.
ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ನೌಕರರು, ಬಳಿಕ ಎಂದಿನಂತೆ ಕಾರ್ಯ ನಿರ್ವಹಿಸಿದರು. ಕರ್ನಾಟಕದ ಸಾರಿಗೆ ನೌಕರರ ಮುಷ್ಕರವು ಹೈಕೋರ್ಟ್‌ನ ಖಡಕ್ ಎಚ್ಚರಿಕೆಯ ನಂತರ ಅಂತ್ಯಗೊಂಡಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್‌ಗಳ ಸಂಚಾರವು ಪುನರಾರಂಭಗೊಂಡಿದೆ. ಪ್ರಯಾಣಿಕರು ಖುಷಿಪಟ್ಟಿದ್ದಾರೆ.
ಬಸ್ ಸಂಚಾರ ಬಂದ್ ಏಕೆ?
ತಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸಾರಿಗೆ ಇಲಾಖೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ಇದರಿಂದ ನಾಲ್ಕೂ ನಿಗಮಗಳ ಬಸ್ ಸಂಚಾರ ಸ್ಥಗಿತಗೊಂಡಿದ್ದವು.
ಮುಷ್ಕರದಿಂದ ಎಲ್ಲೆಲ್ಲಿ ಏನಾಯ್ತು?
ಬೀದರ್ : ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯದ ಸಾರಿಗೆ ನಿಗಮಗಳ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದರು, ಬೀದರ್ ನ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೇ ದರ್ಬಾರು ಕಂಡು ಬಂದಿತು.
ಇವತ್ತು ಮುಂಜಾನೆಯಿಂದ ಯಾವುದೇ ರೀತಿಯ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ, ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಪರದಾಡುವಂತಾಯಿತು. ಇದರಿಂದಾಗಿ ಸರ್ಕಾರಿ ಬಸ್ ನಿಲ್ಲುವ ಸ್ಥಳದಲ್ಲಿ ಖಾಸಗಿ ವಾಹನಗಳು ಬಂದು ಪ್ರಯಾಣಿಕರನ್ನು ಹೊತ್ತೋಯ್ಯುತ್ತಿದ್ದವು. ಆದರೆ, ಖಾಸಗಿ ವಾಹನಗಳು ಪ್ರಮುಖ ನಗರಗಳಿಗೆ ಮಾತ್ರ ಸಾಗುತ್ತಿದ್ದವು. ಹಳ್ಳಿಗಳಿಗೆ ಹೋಗುವ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು.
ಖಾಸಗಿ ವಾಹನಗಳು ಹೆಚ್ಚಿನ ದುಡ್ಡು ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದರು. ಮುಂಜಾನೆಯಿಂದ ಸರ್ಕಾರಿ ಬಸ್ಸುಗಳು ಸ್ಥಬ್ದವಾಗಿದ್ದರಿಂದ ಪ್ರಯಾಣಿಕರಿಗೆ ಖಾಸಗಿ ವಾಹನಗಳಲ್ಲಿ ತೆರಳುವುದು ಅನಿವಾರ್ಯವಾಯಿತು.
ಮಂಡ್ಯ:
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ಒಕ್ಕೂಟಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಂಡ್ಯ ಜಿಲ್ಲೆಯ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧ ಸ್ತಬ್ಧಗೊಂಡಿತು.
ಮಂಡ್ಯ ಜಿಲ್ಲೆಯ 7 ಘಟಕಗಳ ಚಾಲಕರು ಮತ್ತು ನಿರ್ವಾಹಕರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಗೈರು ಹಾಜರಾಗಿರುವ ಪರಿಣಾಮ ಬೆಳಿಗ್ಗೆ 6 ಗಂಟೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆಗೀಡಾದರು.
ಹುಬ್ಬಳ್ಳಿ:
ಇನ್ನೂ ಸಾರಿಗೆ ಬಸ್ ಸಿಬ್ಬಂದಿ ನಡೆಸಿದ ಬಂದ್ ಬಿಸಿ ಹುಬ್ಬಳ್ಳಿಗೂ ತಟ್ಟಿತು. ನಗರದ ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಹಾಗೂ ಸಿಬಿಟಿಯಲ್ಲಿ ಪ್ರಯಾಣಿಕರು ಪರದಾಟ ನಡೆಸಿದರು.
ಗದಗ:
ಬಂದ್ ಹಿನ್ನೆಲೆ, ಗದಗ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಗದಗ ಬಸ್ ನಿಲ್ದಾಣದಲ್ಲಿ NCC ವಿದ್ಯಾರ್ಥಿನಿಯರು ಬಸ್ ಇಲ್ಲದೇ ಪರದಾಟ ನಡೆಸಿದರು. ನೀರು, ಉಪಹಾರವಿಲ್ಲದೇ ವಿದ್ಯಾರ್ಥಿನಿಯರು ಸುಸ್ತಾಗಿದ್ದರು.
ಒಂದೆಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕದಾದ್ಯಂತ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದರೆ, ಮತ್ತೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ವಾಹನ ಚಾಲಕರು ದುಪ್ಪಟ್ಟು ದರ ವಿಧಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದರು. ಗದಗ ನಗರದ ಬಸ್ ನಿಲ್ದಾಣ ಬಳಿ ಖಾಸಗಿ ವಾಹನಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿತ್ತು. ಗದಗದಿಂದ ಮುಂಡರಗಿ ಪಟ್ಟಣಕ್ಕೆ ಬರೋಬ್ಬರಿ 100 ರೂ ವಸೂಲಿ ಮಾಡಲಾಯಿತು. ಸಾರಿಗೆ ದರ 58. ರೂ. ಇದ್ರು 42 ರೂ ಹೆಚ್ಚಿಗೆ ವಸೂಲಿ ಮಾಡಲಾಗಿದೆ.
ಇದೇ ರೀತಿ ಬೆಂಗಳೂರು, ದೇವನಹಳ್ಳಿ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ, ಕೊಡಗು, ಚಿಕ್ಕಮಗಳೂರು, ಸೇರಿ ಹಲವೆಡೆ ಬಂದ್ ಬಿಸಿ ಪ್ರಯಾಣಿಕರಿಗೆ ತಟ್ಟಿದ್ದು, ರಸ್ತೆಯಲ್ಲಿ ಕಾದು-ಕಾದು ಪ್ರಯಾಣಿಕರು ತೀವ್ರ ಅಸಮಾಧಾನ ಹೊರ ಹಾಕಿದರು.
ಒಟ್ಟಾರೆ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ಉಂಟಾದ ತೊಂದರೆ ಅರಿತ ಹೈಕೋರ್ಟ್ ಛೀಮಾರಿ ಹಾಕಿತು. ಇದರಿಂದಾಗಿ ಸಾರಿಗೆ ನೌಕರರು, ಬುಧವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ.