ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಕರ್ನಾಟಕದಾದ್ಯಂತ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಮತ್ತೊಂದೆಡೆ ಬಸ್ ಇಲ್ಲದ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಯಾಣಿಕರು ಮೆಟ್ರೋ ಮೊರೆ ಹೋಗಿದ್ದಾರೆ. ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡ್ತಿದ್ದಾರೆ. ದಿನನಿತ್ಯಕ್ಕಿಂತ ಮೆಟ್ರೋ ಪ್ರಯಾಣಿಕರು ಹೆಚ್ಚಾಗಿರುವುದರಿಂದ ತೊಂದರೆಯಾಗದಂತೆ ಮೆಟ್ರೋ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ಮೆಟ್ರೋ ನಿಲ್ದಾಣದ ಹೊರಗಿನಿಂದಲೂ ಪ್ರಯಾಣಿಕರು ಕ್ಯೂ ನಿಂತಿದ್ದಾರೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಕ್ಯೂ ಗಟ್ಟಲೆ ಪ್ರಯಾಣಿಕರು ಜಮಾಯಿಸಿದ್ದರಿಂದ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಬಸ್ಗಳ ಸಂಚಾರ ಕಡಿಮೆ ಆಗಿದ್ದರಿಂದ ಹಲವರು ಸ್ವಂತ ವಾಹನಗಳಲ್ಲೇ ಸಂಚಾರ ಮಾಡುತ್ತಿದ್ದಾರೆ.