ಪ್ರವಾಸದಿಂದ ಜ್ಞಾನ ದಿಗಂತದ ವಿಸ್ತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಪ್ರವಾಸ ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶ ಸುತ್ತು-ಕೋಶ ಓದು ಎನ್ನುವಂತೆ ದೇಶ ತಿರುಗುವುದರಿಂದ ಪ್ರವಾಸದಲ್ಲಿ ಹೊಸ ಹೊಸ ಅನುಭವಗಳು ಆಗುವವು. ಅಂತಹ ಅನುಭವಗಳ ಪ್ರವಾಸ ಕಥನಗಳು ಓದುಗರಿಗೆ ಸಾಕ್ಷಾತ್ ಪ್ರವಾಸ ಮಾಡಿದ ಅನುಭವ ನೀಡುವಂತಹ ಸಾಹಿತ್ಯವಾಗಿದೆ ಎಂದು ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಹೇಳಿದರು.

Advertisement

ಅವರು ನಗರದ ಗದಗ ರೆಸ್ಟೋರೆಂಟ್ ಸಭಾಂಗಣದಲ್ಲಿ ಗೆಳೆಯರ ಬಳಗ ಏರ್ಪಡಿಸಿದ್ದ ಹಿರಿಯ ಸಾಹಿತಿ, ನಿವೃತ್ತ ಪತ್ರಕರ್ತ ಡಾ. ಮಲ್ಲಿಕಾರ್ಜುನ ಕುಂಬಾರ ಅವರ ‘ಕಾಲಿಗೆ ಗಾಲಿ ಕಟ್ಟಿಕೊಂಡು’ ಪ್ರವಾಸ ಕಥನಗಳ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರವಾಸ ಪ್ರಯಾಸ ಆದರೂ ಪ್ರವಾಸಿಗನಿಗೆ ಜ್ಞಾನದ ದಿಗಂತ ಹೆಚ್ಚುವದು. ಪ್ರವಾಸಿ ತಾಣ, ಪ್ರದೇಶ, ಜನಾಂಗ, ಭಾಷೆ, ಆಹಾರ-ವಿಹಾರ ಎಲ್ಲವೂ ಹೊಸ ಹೊಸ ಅನುಭವ ನೀಡಬಲ್ಲವು. ಅಂತಹ ಅನುಭವಗಳನ್ನು ಪಡೆದುಕೊಂಡ ಹಿರಿಯ ಸಾಹಿತಿ ಪ್ರವಾಸ ಕಥನ ಪ್ರಪಂಚಕ್ಕೆ ಹೊಸ ಕೊಡುಗೆ ನೀಡಿದ್ದಾರೆ ಎಂದರು.

ಸಾಹಿತಿಗಳಾದ ಶಿವನಗೌಡ ಗೌಡರ, ಐ.ಕೆ. ಕಮ್ಮಾರ ಅವರು ಡಾ.ಮಲ್ಲಿಕಾರ್ಜುನ ಕುಂಬಾರ ಅವರ ಸಾಹಿತ್ಯಿಕ ಕೃತಿಗಳ ಬಗ್ಗೆ, ಉಪನ್ಯಾಸಕರಾಗಿ, ಪತ್ರಕರ್ತರಾಗಿಯೂ ಸಲ್ಲಿಸಿದ ಸೇವೆಯನ್ನು ಅಭಿನಂದಿಸಿದರು. ಶಶಿಧರ ಮಂಗಳೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರೇಕ್ಷರಾಗಿ ಪಾಲ್ಗೊಂಡಿದ್ದ ರೋಣ ಗುಲಗಂಜಿಮಠದ ಪೂಜ್ಯ ಗುರುಪಾದದೇವರು, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ಮಾತನಾಡಿ, ಸರಳ ವ್ಯಕ್ತಿತ್ವದ ಕುಂಬಾರರು ಕನ್ನಡ ಸಾಹಿತ್ಯಕ್ಕೆ ವೈವಿದ್ಯಮಯವಾದ ಸಾಹಿತ್ಯಿಕ ಕೃತಿಗಳನ್ನು ನೀಡಿದ್ದಾರೆಂದು ಬಣ್ಣಿಸಿದರು. ಡಾ.ಕುಂಬಾರ ಅವರನ್ನು ರೋಣ ಗುಲಗಂಜಿಮಠದ ಪೂಜ್ಯ ಗುರುಪಾದದೇವರು, ಗೆಳೆಯರ ಬಳಗ, ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನೂರು ವರ್ಷಗಳ ಹಿಂದೆ ಪ್ರವಾಸ ಸಾಹಿತ್ಯದ ಕೊರತೆ ಇತ್ತು. ಪ್ರವಾಸ ಎಂದರೆ ಅದೊಂದು ತೀರ್ಥಯಾತ್ರೆ ಎಂಬ ಭಾವನೆ ಇತ್ತು. ಪ್ರಾಚ್ಯ ಪ್ರಜ್ಞೆ ಬೆಳೆದಂತೆ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಂಡಂತೆ ಪ್ರವಾಸಕ್ಕೆ ಮತ್ತು ಪ್ರವಾಸ ಕಥನ ಸಾಹಿತ್ಯದ ಮಹತ್ವ ಹೆಚ್ಚುತ್ತ ಬಂತು ಎಂದರು.

ಪ್ರಯಾಸದ ಪ್ರವಾಸ ಹೆಚ್ಚು ಅನುಕೂಲತೆ ಸೌಲಭ್ಯಗಳಿಂದಾಗಿ ಉಲ್ಲಾಸದ ಪ್ರವಾಸವಾಗಿ ಮಾರ್ಪಡುತ್ತ ಬಂದು, ಇಂದು ಪ್ರವಾಸ ಒಂದು ಉದ್ಯಮವಾಗಿ ಬೆಳೆದು ಬಂದಿದೆ. ದೇಶದ ಹಲವಾರು ರಾಜ್ಯಗಳ ಪ್ರವಾಸ ಮಾಡಿರುವ ಸಾಹಿತಿ ಡಾ. ಕುಂಬಾರ ಅವರು ತಾವು ಕೈಗೊಂಡ ಪ್ರವಾಸದ ಸಾರವನ್ನು ಕಥನವಾಗಿಸಿ ಪ್ರಕಟಿಸಿದ ಈ ಗ್ರಂಥ ಮೌಲಿಕ ಗ್ರಂಥವಾಗಿದೆ ಎಂದರು.

ಶಿವಾನಂದ ಮಠದ ಸ್ವಾಗತಿಸಿದರು ಕೆ.ಸಿ. ಲಮಾಣಿ ಪರಿಚಯಿಸಿದರು. ಎಸ್.ಬಿ. ಮಾಮನಿ ನಿರೂಪಿಸಿದರು, ಬಸವರಾಜ ದಂಡಿನ ಕೃತಿ ಪರಿಚಯಿಸಿದರು. ಕೊನೆಗೆ ಪಿ.ಎನ್. ರಾಠೋಡ ವಂದಿಸಿದರು.

ಸಮಾರಂಭದಲ್ಲಿ ಪ್ರಾಚ್ಯ ವಸ್ತು ಸಂಶೋಧಕ ಅ.ದ. ಕಟ್ಟಿಮನಿ, ಡಾ. ರಾಜಶೇಖರ ದಾನರಡ್ಡಿ, ವೈ.ಜಿ. ಪಾಟೀಲ, ಹುಲ್ಲಪ್ಪ ಅರಗಂಜಿ, ಕಲ್ಲಯ್ಯ ಹಿರೇಮಠ, ಅಂದಾನೆಪ್ಪ ವಿಭೂತಿ, ಬಸವರಾಜ ಬಂಡಿವಾಡ, ಪ್ರೊ. ಕಿಶೋರಬಾಬು ನಾಗರಕಟ್ಟಿ, ಬಸವರಾಜ ವಾರಿ, ಬಸವರಾಜ ಕರಮುಡಿ ಮುಂತಾದವರು ಪಾಲ್ಗೊಂಡಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕುಂಬಾರ, ಪ್ರವಾಸದಿಂದ ನನಗೆ ಆತ್ಮತೃಪ್ತಿ ದೊರೆತಿದೆ. ಪ್ರವಾಸ ಕಥನಗಳ ಈ ಗ್ರಂಥವನ್ನು ಪ್ರಕಟಿಸಿ ನನಗೆ ಸಂತೃಪ್ತಿ ದೊರೆತಿದೆ. ಬರಲಿರುವ ದಿನಗಳಲ್ಲಿ ಅಧ್ಯಯನ, ಬರವಣಿಗೆ ಮುಂದುವರೆಸುವದಾಗಿ ಹೇಳಿದರು.


Spread the love

LEAVE A REPLY

Please enter your comment!
Please enter your name here