ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಆಧುನಿಕ ಯುಗದಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯಯುತ, ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ತಾಲೂಕಿನ ಕಡಕೋಳ ಬಸವಬೆಟ್ಟದ ಬಸವಯೋಗಾಶ್ರಮ ಮತ್ತು ನಿಸರ್ಗ ಚಿಕಿತ್ಸಾಲಯದಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಾ ವೈದ್ಯರ ಸಂಘದಿAದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯೋ ನಾರಾಯಣೋ ಹರಿ ಎಂಬ ವೇದೋಕ್ತಿಯಂತೆ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಎಲ್ಲರಿಗೂ ಇಂತಹ ಭಾಗ್ಯ ಸಿಗುವದಿಲ್ಲ. ಸಿಕ್ಕಿರುವ ವೃತ್ತಿಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ತಮ್ಮ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ನಾನು ಕೂಡಾ ಶಾಸಕನಾಗಿ ಆಯ್ಕೆಯಾಗಿದ್ದರೂ ಪ್ರತಿನಿತ್ಯವೂ ರೋಗಿಗಳಿಗೆ ತಪಾಸಣೆ ನಡೆಸುತ್ತಿದ್ದೇನೆ. ಇದರ ಜೊತೆಗೆ ಶಾಸಕನಾಗಿ ನನ್ನ ಜವಾಬ್ದಾರಿಯನ್ನೂ ಮುನ್ನೆಡೆಸಿಕೊಂಡು ಹೋಗುತ್ತಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ.ಡಿ. ತೋಟದ ವಹಿಸಿದ್ದರು. ಅತಿಥಿಗಳಾಗಿ ಬಸವ ಯೋಗಾಶ್ರಮದ ಗುರುಮಾತೆ ಓಂಕಾರೇಶ್ವರಿ ಮಾತಾಜಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಡಾ. ಎಸ್.ಎಂ. ಬುರಬುರೆ, ಡಾ. ಆಶಾ ಪಿ.ತೋಟದ, ಡಾ. ಡಿ.ಡಿ. ಬಡೇಖಾನ, ಡಾ. ಎಂ.ಸಿ. ಪ್ರಭುಗೌಡರ, ಡಾ. ಪವನ ಟಿ.ಮಹೇಂದ್ರಕರ ಮುಂತಾದವರು ಉಪಸ್ಥಿತರಿದ್ದರು.