ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಶ್ರೀ ಸೋಮೇಶ್ವರ ದೇವರಿಗೆ ನಾಡಿನಾದ್ಯಂತ ಭಕ್ತರಿದ್ದು, ಅನೇಕ ಕಡೆಗಳಿಂದ ಜಾತ್ರೆ, ಯುಗಾದಿ, ನವರಾತ್ರಿ, ಕಾರ್ತಿಕ ಇತ್ಯಾದಿ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿ ಭಕ್ತಿ ಸಮರ್ಪಣೆ ಮಾಡಿಕೊಳ್ಳುವವರನ್ನು ನೋಡಬಹುದು.
ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಗ್ರಾ.ಪಂ ಸದಸ್ಯ ಪ್ರವೀಣ ಕಡೂರ ನೇತೃತ್ವದ ಸುಮಾರು 21 ಯುವಕರ ತಂಡವು ಹಲಗೇರಿಯಿಂದ ಪಾದಯಾತ್ರೆಯ ಮೂಲಕ ಶುಕ್ರವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿದರು. ಪ್ರತಿವರ್ಷ ಜಾತ್ರಾ ಸಮಯದಲ್ಲಿ ಲಕ್ಷ್ಮೇಶ್ವರದ ಸೋಮೇಶ್ವರನ ಸನ್ನಿಧಿಗೆ ಆಗಮಿಸುವ ಈ ತಂಡದ ಸದಸ್ಯರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿರುವದು ವಿಶೇಷವಾಗಿದೆ.
ಜಾತ್ರೆಯ ದಿನ ಅಂದರೆ ಶನಿವಾರ ದೇವಸ್ಥಾನದಲ್ಲಿ ಅಲ್ಲಲ್ಲಿ ಇರುವ ಕಸವನ್ನು ಸ್ವಚ್ಛಗೊಳಿಸುವದು ಮತ್ತು ಅಂದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆಗೆ ನೆರವಾಗುವುದು ಮತ್ತು ಜಾತ್ರೆಗೆ ಬರುವ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಸರಿಯಾಗಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಈ ಯುವ ಪಡೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ಅರುಣ ಕಡೂರ, ಪ್ರಶಾಂತ ಕಡೂರ, ನಿಖಿಲ್ ಕಡೂರ, ಕಿರಣ ಕಡೂರ ಸೇರಿದಂತೆ ಅನೇಕ ಯುವಕರು ಪಾದಯಾತ್ರೆಯ ಮೂಲಕ ಆಗಮಿಸಿದ್ದು, ಎರಡು ದಿನಗಳ ಕಾಲ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರತಿವರ್ಷ ಜಾತ್ರೆಯ ವೇಳೆಯಲ್ಲಿ ನಮ್ಮ ಮನೆ ದೇವರು ಸೋಮೇಶ್ವರನ ಸನ್ನಿಧಿಗೆ ಪಾದಯಾತ್ರೆಯ ಮೂಲಕ ಬರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಬರಿಗಾಲಿನಲ್ಲಿ ಹಲಗೇರಿಯಿಂದ ಎರಡು ದಿನ ಮುಂಚಿತವಾಗಿ ಹೊರಟು, ಜಾತ್ರೆಯ ವೇಳೆಗೆ ಇಲ್ಲಿ ತಲುಪುತ್ತಿದ್ದೇವೆ. ದೇವರ ಸೇವೆ ಮಾಡುವದು ನಮಗೆ ದೊರಕಿದ ಪುಣ್ಯವಾಗಿದೆ.
– ಪ್ರವೀಣ ಕಡೂರ.
ಗ್ರಾ.ಪಂ ಸದಸ್ಯ, ಹಲಗೇರಿ.