ವಿಜಯಸಾಕ್ಷಿ ಸುದ್ದಿ, ಗದಗ: ಡಿಸೆಂಬರ್ 8ರಿಂದ 10ರವರೆಗೆ ಶ್ರೀಲಂಕಾದ ರತ್ನಾಪೂರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾಸಿಟಿಂಗ್ ಥ್ರೋಬಾಲ್ ಚಾಂಪಿಯನ್ಶಿಪ್ಗೆ ಭಾರತದ ಪ್ರತಿನಿಧಿಗಳಾಗಿ ಗದಗ ಜಿಲ್ಲೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಅವರನ್ನು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸನ್ಮಾನಿಸಿ ಶುಭ ಕೋರಿದರು.
ಜಿಲ್ಲೆಯ ಕ್ರೀಡಾಪಟುಗಳಾದ ಮಾಲತಿ ಇನಾಮತಿ, ಬಿ. ಆನಂದ್, ಮಹಾಂತೇಶ ಗೋವಿಂದಪ್ಪ ಬಿ ಅವರುಗಳು ಅಂತಾರಾಷ್ಟ್ರೀಯ ಪ್ಯಾರಾಸಿಟಿಂಗ್ ಥ್ರೋಬಾಲ್ ಕ್ರೀಡೆಗೆ ಗದಗ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ ಮತ್ತು ಶ್ರೀಲಂಕಾಗೆ ತೆರಳಲಿದ್ದಾರೆ. ಭಾರತದಿಂದ ಒಟ್ಟು 24 ತಂಡಗಳು ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದವು. ಮಹಿಳಾ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿತು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ ಶಿರೋಳ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ಇತರರು ಹಾಜರಿದ್ದರು.


