ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಅಬ್ಬಿಗೇರಿ ಕಂಪೌಂಡ್ನಲ್ಲಿರುವ ಸ್ಥಾನಕವಾಸಿ ಜೈನ್ ಭವನದಲ್ಲಿ ರಾಯಚೂರ ನಿವಾಸಿಗಳಾದ ದಿಲೀಪ್ ಕುಮಾರ್ ಜಿ ಧೋಕಾ ಅವರು ತಮ್ಮ 58ನೇ ವಯಸ್ಸಿನಲ್ಲಿ ಸಂಸಾರದ ಸಂಪತ್ತು, ಸುಖಗಳನ್ನು ತ್ಯಜಿಸಿ ಜೂನ್ 11ರಂದು ಜೈನ ಮುನಿ ದೀಕ್ಷೆಯನ್ನು ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಗದಗ ಜೈನ ಸಮಾಜದ ವತಿಯಿಂದ ಹಾಗೂ ಬಾಗಮಾರ ಪರಿವಾರದ ವತಿಯಿಂದ ಅವರ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಗದಗ ಜೈನ ಸಮಾಜದ ಅಧ್ಯಕ್ಷ ರೂಪಚಂದ ಪಾಲರೇಚಾ, ಉಪಾಧ್ಯಕ್ಷ ದಿನೇಶ ಜೈನ, ಕಿಶನ್ಲಾಲ ಬಾಗಮಾರ ಹಾಗೂ ಸಮಾಜದ ಸದಸ್ಯರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ದಿಲೀಪ್ ಕುಮಾರ ಧೋಕಾ ಮಾತನಾಡಿ, ಸಂಸಾರ ಅಸಾರವಾಗಿದೆ. ಮಾನವ ಜನ್ಮ ಸಿಕ್ಕಿರುವುದು ಆತ್ಮ ಸಾಧನೆಗೆ ಹಾಗೂ ಮೋಕ್ಷವನ್ನು ಪಡೆಯಲು ಎಂದರು.
ಮಹಿಳಾ ಸಂಘದ ವತಿಯಿಂದ ಇಂದಿರಾಜಿ ಬಾಗಮಾರ ಹಾಗೂ ಮಮತಾ ಲುಂಕಡ್ ಮುಂತಾದ ಮಹಿಳಾ ಸದಸ್ಯರು ಅಭಿನಂದಿಸಿದರು. ಇಂದಿರಾಜಿ ಬಾಗಮಾರ ಮಾತನಾಡಿ, ಸಂಸಾರದ ಎಲ್ಲ ಸುಖಗಳನ್ನು ತ್ಯಜಿಸಿ ಅತೀ ಕಠಿಣವಾದ ಜೈನ ಸನ್ಯಾಸ ದೀಕ್ಷೆ ಪಡೆಯುವುದು ಸುಲಭದ ಮಾತಲ್ಲ. ಪರಿವಾರದ ಎಲ್ಲ ಸಂಬಂಧಗಳನ್ನು ತೊರೆದು ತಮ್ಮ ಆತ್ಮೋದ್ಧಾರಕ್ಕಾಗಿ ಹೋರಟಿರುವ ದಿಲೀಪಜಿಯವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಶೋಕ ಬಾಗಮಾರ, ಸಂಜಯ ಬಾಗಮಾರ, ದೀಪಚಂದ್, ವಿಜಯ್ ಕುಮಾರ್, ಕಿಶೋರ್, ಸಂಜಯ್, ಶ್ರವಣ್, ನಲಿನ್, ಶೈಲೇಶ್, ಸಂಕಿತ್, ಡಾ. ಆರ್.ಎನ್. ಗೋಡಬೋಲೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜೈನ ಸಮಾಜದ ಉಪಾಧ್ಯಕ್ಷ ಕಿಶನ್ಲಾಲ ಬಾಗಮಾರ ನಿರೂಪಿಸಿದರು.