ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿಯ ನೂತನ ಜಿಲ್ಲಾಪ್ರಭಾರಿಗಳಾಗಿ ಅಧಿಕಾರ ವಹಿಸಿಕೊಂಡ ಗಿರಿಯಪ್ಪ ಮಡಿವಾಳರ ಇವರಿಗೆ ಜಿಲ್ಲಾ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಕಿಸಾನ ಪಂಚಾಯತ, ಯುವ ಭಾರತ ಸಂಘಟನೆಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮುನಸಿಪಲ್ ಮೈದಾನದ ವಾಯು ವಿಹಾರ ಸಂಘದ ಅಧ್ಯಕ್ಷರು ಸಂಘದ ಪರವಾಗಿ ಹಾಗೂ ನಗರಸಭಾ ಮಾಜಿ ಸದಸ್ಯ ಅಕ್ಕಿಯವರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಿರಿಯಪ್ಪ ಮಡಿವಾಳರ, ಯೋಗ ಹಾಗೂ ಆಯುರ್ವೇದಕ್ಕೆ ನನ್ನ ಶಕ್ತಿ ಮೀರಿ ಸೇವೆ ಕೊಡಲು, ಮನೆ ಮನೆಗೆ ಯೋಗ ಮುಟ್ಟಿಸುವ ಉದ್ದೇಶದಿಂದ ಹೊಸ ಕಕ್ಷೆಗಳನ್ನು ಪ್ರಾರಂಭಿಸುವುದು ಹಾಗೂ ಅವುಗಳು ನಿರಂತರವಾಗಿ ನಡೆಯುವಂತೆ ಮುತುವರ್ಜಿವಹಿಸುವುದು ನನ್ನ ಜವಾಬ್ದಾರಿಯಾಗಿದೆಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸ್ವಾಭಿಮಾನ ಟ್ರಸ್ಟ್ನ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳೆ ಮಾತನಾಡಿ, ನಾವು ಪ್ರತಿ ದಿನ ಯೋಗಕ್ಕೆ ಬರುವುದು ನಮ್ಮ ಆರೋಗ್ಯಕ್ಕಾಗಿ, ಆದರೆ ಯೋಗದಲ್ಲಿ ಸೇವೆ ಕೊಡುವುದರಿಂದ ಸಮಾಜ ಸ್ವಾಸ್ಥ್ಯ ಹಾಗೂ ರಾಷ್ಟ್ರದ ಸ್ವಾಸ್ಥ್ಯ ವೃದ್ಧಿಸಿ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಾವು ನಮಗೆ ಗೊತ್ತಾಗದ ಹಾಗೆ ಸೇವೆಯನ್ನು ಕೊಡುವುದರಲ್ಲಿ ಸಂದೇಹವೇ ಇಲ್ಲ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎನ್. ಬಳ್ಳಾರಿ, ಸಂತೋಜಿಯವರು ಮಾತನಾಡಿದರು. ವೇದಿಕೆಯ ಮೇಲೆ ಸಮಿತಿಯ ಜಿಲ್ಲಾ ಖಜಾಂಚಿ ಕೆ.ಎಸ್. ಗುಗ್ಗರಿ ಉಪಸ್ಥಿತರಿದ್ದರು. ಸಹಪ್ರಭಾರಿ ಆಂಜನೇಶ ಮಾನೆ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ನಾಗರತ್ನಾ ಬಡಿಗಣ್ಣವರ ನಿರೂಪಿಸಿದರು. ಮಹಿಳಾ ಜಿಲ್ಲಾ ಪ್ರಭಾರಿ ಶೋಭಾ ಗುಗ್ಗರಿ ವಂದಿಸಿದರು.