ಶಿವಮೊಗ್ಗ: ಮೃಗಾಲಯದಲ್ಲಿ ನಡೆದ ದಾರುಣ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಟ್ರೈನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸ್ಮರಣಾರ್ಥ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ಅವರು, ಬನ್ನೇರುಘಟ್ಟದಲ್ಲಿ ಜನಿಸಿದ ಆನೆ ಮರಿಯಿಗೆ ಸಮೀಕ್ಷಾ ರೆಡ್ಡಿ ಅವರ ಹೆಸರನ್ನು ಇಡುವುದಾಗಿ ಘೋಷಿಸಿದ್ದಾರೆ. ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿ, “ಈ ಘಟನೆ ನಮ್ಮನ್ನೆಲ್ಲ ಆಘಾತಕ್ಕೀಡಾಗಿಸಿದೆ. ಇಂತಹ ಘಟನೆ ಮರುಕಳಿಸಬಾರದು,” ಎಂದು ಹೇಳಿದ್ದಾರೆ.
ಸಮೀಕ್ಷಾ ರೆಡ್ಡಿ ಅವರಿಗೆ ಹುತಾತ್ಮ ಪಟ್ಟ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಘಟನೆಯ ಕುರಿತು ಪೊಲೀಸ್ ಹಾಗೂ ಅರಣ್ಯ ಇಲಾಖೆಗಳಿಂದ ಸಮಗ್ರ ತನಿಖೆ ನಡೆಯುತ್ತಿದ್ದು, ವರದಿ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದಾಳಿ ನಡೆಸಿದ ನೀರಾನೆ ಎರಡು ಬಾರಿ ಮರಿ ಕಳೆದುಕೊಂಡಿದ್ದ ಹಿನ್ನೆಲೆ, ಮೂರನೇ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚು ಸಂವೇದನಾಶೀಲವಾಗಿ ವರ್ತಿಸಿ, ಮರಿಯನ್ನು ಕಾಪಾಡುವ ಸಹಜ ಪ್ರವೃತ್ತಿಯಿಂದ ದಾಳಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.



