ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಗೆ ಅಮೆರಿಕ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಆಸಿಫ್ ಮರ್ಚೆಂಟ್ (47) ಎಂದು ಗುರುತಿಸಲಾಗಿದೆ. ಪ್ರಾಸಿಕ್ಯೂಟರ್‌ಗಳ ಪ್ರಕಾರ, ಆತ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಸಂಪರ್ಕ ಹೊಂದಿದ್ದು, ಅಮೆರಿಕದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಸುಪಾರಿ ಹಂತಕರನ್ನು ಹುಡುಕುವ ಪ್ರಯತ್ನದ ವೇಳೆ ಆಸಿಫ್ ಮರ್ಚೆಂಟ್ ಅರಿವಿಲ್ಲದೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಏಜೆಂಟ್‌ಗಳನ್ನು ಸಂಪರ್ಕಿಸಿದ್ದ. ಇದರಿಂದಾಗಿ ಆತನ ಯೋಜನೆ ಆರಂಭದಲ್ಲೇ ವಿಫಲವಾಯಿತು.
ಒಂದು ವಾರದ ವಿಚಾರಣೆಯ ಬಳಿಕ **ಬ್ರೂಕ್ಲಿನ್**ನ ನ್ಯಾಯಾಲಯ ಆಸಿಫ್ ಮರ್ಚೆಂಟ್‌ನ್ನು ಭಯೋತ್ಪಾದನೆ ಮತ್ತು ಸುಪಾರಿ ಕೊಲೆ ಸಂಚು ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಿದೆ. ಈ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸಾಕ್ಷ್ಯಗಳ ಪ್ರಕಾರ, ಆರೋಪಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಗಿನ ಅಧ್ಯಕ್ಷ ಜೋ ಬೈಡನ್ ಹಾಗೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ವಿಶ್ವಸಂಸ್ಥೆಯ ರಾಯಭಾರಿ ನಿಕ್ಕಿ ಹ್ಯಾಲಿ ಅವರನ್ನು ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿ ಹಿಂದೆ ಪಾಕಿಸ್ತಾನಿ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಿದ್ದನು. ಪಾಕಿಸ್ತಾನ ಮತ್ತು ಇರಾನ್ ಎರಡೂ ದೇಶಗಳಲ್ಲಿ ಕುಟುಂಬ ಹೊಂದಿದ್ದ ಆತ ವ್ಯವಹಾರಕ್ಕಾಗಿ ಆಗಾಗ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದನು. ಸುಮಾರು ಮೂರು ವರ್ಷಗಳ ಹಿಂದೆ ಇರಾನ್‌ನ ಗುಪ್ತಚರರು ಅವನನ್ನು ಸಂಪರ್ಕಿಸಿ ಕಣ್ಗಾವಲು ತರಬೇತಿ ನೀಡಿದ್ದು, ಹತ್ಯೆ ಸಂಚು ರೂಪಿಸಲು ಪ್ರೇರೇಪಿಸಿದ್ದರೆಂಬ ಆರೋಪ ಕೇಳಿಬಂದಿದೆ.
ಆದರೆ ಈ ಪ್ರಕರಣದಲ್ಲಿ ಇರಾನ್ ಸರ್ಕಾರ ನೇರವಾಗಿ ಭಾಗಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



