ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತ ತನ್ನ ನಿಲುವು ಮುಂದುವರೆಸಿದರೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಟ್ರಂಪ್ ನೀಡಿರುವ ಹೇಳಿಕೆಯ ಆಡಿಯೋವನ್ನು ಶ್ವೇತಭವನ ಬಿಡುಗಡೆ ಮಾಡಿದೆ.
ವೆನುಜುವೆಲಾದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದ್ದು, ವೆನುಜುವೆಲಾದ ತೈಲ ಪ್ರದೇಶವನ್ನು ಅಮೆರಿಕ ವಶಕ್ಕೆ ತೆಗೆದುಕೊಂಡು ತಾವೇ ನಿರ್ವಹಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಭಾರತದ ರಷ್ಯಾ ತೈಲ ಖರೀದಿ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಆಡಿಯೋದಲ್ಲಿ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುತ್ತಲೇ, ಭಾರತದ ತೈಲ ಖರೀದಿ ನೀತಿಯ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮುಂದುವರೆದರೆ ಅದರ ಪರಿಣಾಮಗಳನ್ನು ಭಾರತ ಎದುರಿಸಬೇಕಾಗಬಹುದು ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದ್ದಾರೆ.
“ನನ್ನನ್ನು ಸಂತೋಷಪಡಿಸಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಾರೆ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ತಿಳಿದಿತ್ತು. ನನ್ನನ್ನು ಸಂತೋಷಪಡಿಸುವುದು ಮುಖ್ಯ ಎಂದು ಅವರು ಅರಿತಿದ್ದರು” ಎಂದು ಟ್ರಂಪ್ ಹೇಳಿದ್ದಾರೆ.



