ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೂರಾರು ಸೌಲಭ್ಯಗಳನ್ನು ಒದಗಿಸುವ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಸೇರಿಸಿ ಅವರ ಉಜ್ವಲ ಭವಿಷ್ಯಕ್ಕೆ ಸರಕಾರ ಗ್ಯಾರಂಟಿ ನೀಡುತ್ತದೆ ಎಂದು ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಹೇಳಿದರು.
ಅವರು ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ `ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳಲ್ಲಿರುವ 50ಕ್ಕೂ ಹೆಚ್ಚು ಸೌಲಭ್ಯಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿ, ಅವುಗಳ ಸದುಪಯೋಗ ಮಾಡಿಕೊಂಡು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಹಾಜರಾತಿ ಹೆಚ್ಚಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಸರ್ಕಾರಿ ಶಾಲೆಗಳು ಮೊದಲಿನಂತಿಲ್ಲ. ಉತ್ಕೃಷ್ಟ ಮಟ್ಟದ ಶಿಕ್ಷಣ ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸಿಗುತ್ತಿವೆ. ಅಲ್ಲದೇ ಪ್ರತಿವರ್ಷ ರ‍್ಯಾಂಕ್‌ಗಳ ಪಟ್ಟಿಯಲ್ಲಿ ಸರ್ಕಾರಿ ಶಾಲೆಗಳೂ ಇರುವುದನ್ನು ಗಮನಿಸಬಹುದು. ಹೆಚ್ಚು ಪ್ರತಿಭಾವಂತ ಶಿಕ್ಷಕರುಗಳು ಇರುವುದೇ ಸರ್ಕಾರಿ ಶಾಲೆಗಳಲ್ಲಿ. ಆದರೂ ಪಾಲಕರು ಅಬ್ಬರದ ಪ್ರಚಾರ ಮೋಹಕ್ಕೆ ಹಾಗೂ ಪ್ರತಿಷ್ಠೆಗೆ ಸಿಲುಕಿ ದುಬಾರಿ ವೆಚ್ಚವನ್ನು ವ್ಯಯಿಸಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದು ವಿಷಾದನೀಯ ಎಂದರು.
ಸಾ.ಶಿ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಸರಸ್ವತಿ ಕನವಳ್ಳಿ ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಎಸ್.ಡಿ.ಎಂ.ಸಿ ಪದಾಧಿಕಾರಿಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿದ್ಧಲಿಂಗ ನಗರ ಪ್ರೌಢಶಾಲೆಯ ಕಿರು ಪರಿಚಯವುಳ್ಳ ಕರಪತ್ರವನ್ನು ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವಿದ್ಯಾ ಗಡಗಿ, ಎಸ್‌ಡಿಎಂಸಿ ಅಧ್ಯಕ್ಷರಾದ ನಂದಾ ಅಶೋಕ ಖಟವಟೆ, ಸಾ.ಶಿ ಇಲಾಖೆ ಡಿ.ವಾಯ್.ಪಿ.ಸಿಗಳಾದ ರವಿಪ್ರಕಾಶ, ಎಂ.ಎಚ್. ಕಂಬಳಿ, ಎ.ಪಿ.ಸಿ.ಓ ಶಿವಕುಮಾರ ಕುರಿ, ಡೈಯಟ್ ಉಪನ್ಯಾಸಕರಾದ ಅರವಟಗಿ, ಎಸ್.ಪಿ. ಪ್ರಭಯ್ಯನಮಠ ಸೇರಿದಂತೆ ಎಸ್‌ಡಿಎಂಸಿ ಸರ್ವ ಸದಸ್ಯರು, ಶಾಲಾ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮೀ ಅಣ್ಣಿಗೇರಿ ಸ್ವಾಗತಿಸಿದರು. ಬಿ.ಎಸ್. ಯರಗುಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನಮಂತ್ರಿ ಪೋಷಣ ಅಭಿಯಾನದ ತಾಲೂಕಾ ನಿರ್ದೇಶಕ ಶಂಕರ ಹಡಗಲಿ ವಂದಿಸಿದರು.
“ಅನ್ನ-ಅರಿವು-ಅಕ್ಷರ-ಬಟ್ಟೆ ಹೀಗೆ ಸಕಲ ಸೌಲಭ್ಯಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಕಟ್ಟಿ ಬೆಳೆಸುವಲ್ಲಿ ಸರ್ಕಾರ ವಿಶೇಷ ಕಾಳಜಿ ಹೊಂದಿದೆ. ಇದರ ಸದುಯೋಗವನ್ನು ಪ್ರತಿಯೊಬ್ಬ ಪಾಲಕರು ಪಡೆದುಕೊಳ್ಳಬೇಕು. ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯನ್ನು ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದು, ಹಲವಾರು ಜನಪ್ರತಿನಿಧಿಗಳ, ದಾನಿಗಳ ಹಾಗೂ ಸರ್ಕಾರಿ ಸಂಸ್ಥೆಗಳ ಮೂಲಕ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯನ್ನಾಗಿ ಕಟ್ಟಿ ಬೆಳೆಸಿದ್ದಾರೆ”
– ಭರತ್ ಎಸ್.
ಜಿಲ್ಲಾ ಪಂಚಾಯಿತಿ ಸಿಇಓ.