ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳ ಗುರಿ, ಉದ್ದೇಶಗಳು ಕನಸುಗಳ ಮೂಲಕ ಅವರನ್ನು ಉತ್ತೇಜಿಸುವಂತೆ ರೂಪುಗೊಳ್ಳಬೇಕು. ಆ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಅಲ್ಲದೇ ಗುರಿ ಮುಟ್ಟುವ ಛಲ ಹೊಂದಬೇಕೆಂದು ಗದಗದ ಆಶಾಕಿರಣ ರಿಹ್ಯಾಬಿಟೇಶನ್ ಸೆಂಟರ್‌ನ ವೈದ್ಯರಾದ ಡಾ. ಶಿವಪ್ರಸಾದ ದೊಡ್ಡಮನಿ ಅಭಿಪ್ರಾಯಪಟ್ಟರು.
ಅವರು ಹುಲಕೋಟಿಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶ್ರೀನಿವಾಸರಡ್ಡಿ ಗಿರಡ್ಡಿ ಮಾತನಾಡಿ, ಸತತ ಪರಿಶ್ರಮ, ಶ್ರದ್ಧೆಯಿಂದ ಗುರಿ ಸಾಧಿಸುವ ಛಲವಿದ್ದರೆ ವಿದ್ಯಾರ್ಥಿಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರಿಯಾ ಎಮ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸಲು ಓದಿನಲ್ಲಿ ಏಕಾಗ್ರತೆಯನ್ನು ಹೊಂದಬೇಕು, ಸಾಧಿಸುವ ಛಲದಿಂದ ಮುನ್ನುಗ್ಗಬೇಕೆಂದು ಹೇಳಿದರು.
ಶ್ರೇಯಾ ಹಿರೇಮಠಳ ಪ್ರಾರ್ಥಿಸಿದರು. ಉಮ್ಮೆ ಐಮನ್ ನರಗುಂದ ಸ್ವಾಗತಿಸಿದರು. ಕೀರ್ತಿ ಗುಳಗುಂದಿ ಹಾಗೂ ಪೃಥ್ವಿ ಹಿರೇಗೌಡರ ಅತಿಥಿಗಳನ್ನು ಪರಿಚಯಿಸಿದರು. ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ ಈರಣ್ಣ ಕಟಗಿ (ಫೀಲ್ಡ್ ಚಾಂಪಿಯನ್), ಅಭಿಷೇಕ ಹಿರೇಮಠ (ಟ್ರ್ಯಾಕ್ ಚಾಂಪಿಯನ್), ಸುಕನ್ಯಾ ಗಾಣಿಗೇರ (ಫೀಲ್ಡ್ ಚಾಂಪಿಯನ್) ಇವರುಗಳಿಗೆ ಮುಖ್ಯ ಅತಿಥಿಗಳು ಟ್ರೋಫಿಯನ್ನು ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಯೋಗಾಸನದಲ್ಲಿ ಶ್ರೀಕಾಂತ ಕಂಬಳಿ, ಎತ್ತರ ಜಿಗಿತದಲ್ಲಿ ಈರಣ್ಣ ಕಟಗಿ ಹಾಗೂ ಪೃಥ್ವಿ ಹಿರೇಗೌಡರ ಕಾಲೇಜಿನ ಕೀರ್ತಿ ಹೆಚ್ಚಿಸಿದ ನಿಮಿತ್ತ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶ್ರೇಯಾ ಹಿರೇಮಠ, ರೋಜಾ ಕಾತರಕಿ, ಪ್ರಶಾಂತ ಮುಂಡಾಸದ ನಡೆಸಿಕೊಟ್ಟರು. ಪವಿತ್ರಾ ಸನ್ನಿಂಗನ್ನವರ ಹಾಗೂ ಫಾತೀಮಾ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಯೋಗಪ್ರಿಯ ವಂದಿಸಿದರು.



