ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಹೋಬಳಿಯಾದ್ಯಂತ ನ. 2ರಂದು ತುಳಸಿ ವಿವಾಹವನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ಸಂಜೆ ಆಚರಿಸುವ ಹಬ್ಬಕ್ಕೆ ಬೆಳಗ್ಗಿನಿಂದಲೇ ಜನರು ಸಿದ್ಧತೆಯಲ್ಲಿ ತೊಡಗಿದ್ದರು.
ತುಳಸಿ ವಿವಾಹವಾಗಿದ್ದರಿಂದ ಮನೆಗಳಲ್ಲಿ ಭಕ್ಷ್ಯ-ಭೋಜ್ಯಗಳ ಅಡುಗೆ ಸಿದ್ಧವಾಗಿತ್ತು. ಸಂಜೆ ಮನೆಯ ಅಕ್ಕಪಕ್ಕದವರನ್ನೆಲ್ಲ ಕರೆದು, ಶಾಸ್ತ್ರೋಕ್ತವಾಗಿ ತುಳಸಿ ವಿವಾಹ ನೆರವೇರಿಸಿದರು.
ವೈಜ್ಞಾನಿಕವಾಗಿಯೂ ತುಳಸಿ ಮಹತ್ವವನ್ನು ಪಡೆದುಕೊಂಡಿದ್ದು, ಗಾಳಿಯಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ ಅಶುದ್ಧ ಗಾಳಿಯನ್ನು ಹೋಗಲಾಡಿಸುವ ಶಕ್ತಿ ತುಳಸಿಗಿದೆ ಎಂಬುದನ್ನು ಮನಗಂಡಿರುವ ಜನತೆ ಈಗೀಗ ತುಳಸಿ ಗಿಡಗಳನ್ನು ಮನೆಯ ಮುಂದೆ ಹೆಚ್ಚಾಗಿ ಹಚ್ಚುತ್ತಿದ್ದಾರೆ. ಅದರ ಎಲೆಗಳೂ ಸಹ ಆರೋಗ್ಯದ ಸಮಸ್ಯೆಗಳಿಗೆ ಉಪಯೋಗವಾಗುವುದರಿಂದ ತುಳಸಿಯ ಕಡೆಗೆ ಜನರ ಗಮನ ಹೋಗುತ್ತಿದೆ.
ತುಳಸಿ ವಿವಾಹದ ಮಹತ್ವದ ಕುರಿತು ಮಾತನಾಡಿದ ಶ್ರೀವಲ್ಲಭಭಟ್ಟ ಸದರ ಜೋಷಿ, ತುಳಸಿ ಗಿಡವು ಪರಿಶುದ್ಧತೆ, ಪ್ರೀತಿ ಮತ್ತು ಭಕ್ತಿಯನ್ನು ಪ್ರತಿನಿಧಿಸುತ್ತದೆ. ತುಳಸಿಯನ್ನು ಪೂಜಿಸುವುದರಿಂದ ದೈವಿಕ ಆಶೀರ್ವಾದ ದೊರಕುತ್ತದೆ. ಇದರಿಂದ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಬಹುದು. ಈ ಆಚರಣೆಯನ್ನು ನಂಬಿಕೆಯೊಂದಿಗೆ ನಡೆಸಿದರೆ ಕುಟುಂಬ ಜೀವನದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಸಾಮರಸ್ಯವನ್ನು ತರುತ್ತದೆ. ಈ ವಿವಾಹ ನೆರವೇರಿಸಲು ಅದರದ್ದೇ ಆದ ನಿಯಮವಿದ್ದು, ಅದನ್ನು ಸರಿಯಾಗಿ ತಿಳಿದುಕೊಂಡು ಆಚರಿಸಬೇಕೆಂದರು.



