ವಿಜಯಸಾಕ್ಷಿ ಸುದ್ದಿ, ತುಮಕೂರು
ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿ ಒಂದು ವರ್ಷದ ಮಗು ಸೇರಿ 9 ಜನ ಮೃತಪಟ್ಟು, 11ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ದುರ್ಘಟನೆ ಜರುಗಿದೆ.
ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬಾಲೇನಹಳ್ಳಿ ಗೇಟ್ ಬಳಿ ಗುರುವಾರ ನಸುಕಿನಲ್ಲಿ ಈ ಅವಘಡ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕ್ರೂಸರ್ ಹಾಗೂ ಬೆಂಗಳೂರು ಕಡೆಯಿಂದ ತೆರಳುತ್ತಿದ್ದ ಲಾರಿ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.
ಮೃತರನ್ನು ಕ್ರೂಸರ್ ಚಾಲಕ ಸಿರವಾರ ತಾಲೂಕಿನ ವಡವಟ್ಟಿ ಗ್ರಾಮದ ಕೃಷ್ಣಪ್ಪ, ನೀಲಮ್ಮ, ಹಾಗೂ ಸುಜಾತ, ಮೂರು ವರ್ಷದ ಮಗು ವಿನೋದ, ಲಕ್ಷ್ಮೀ, ಬಸಮ್ಮ ಎಂದು ಗುರುತಿಸಲಾಗಿದೆ. ಉಳಿದವರು ಹೆಸರು ಇನ್ನೂ ಪತ್ತೆಯಾಗಿಲ್ಲ.
ಲಾರಿ ಡಿಕ್ಕಿ ಹೊಡೆದ ರಬಸಕ್ಕೆ ಕ್ರೂಸರ್ ಪಲ್ಟಿಯಾಗಿದೆ ಎನ್ನಲಾಗಿದೆ. ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಹಾಗೂ ಮಗು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಕಳ್ಳಂಬೆಳ್ಳ ಮತ್ತು ಶಿರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.