ತುಮಕೂರು:- ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್ ತಗುಲಿ ಲೈನ್ಮ್ಯಾನ್ ಮೃತಪಟ್ಟಿರುವ ಘಟನೆ ಜರುಗಿದೆ.
26 ವರ್ಷದ ಕೆ.ಪಿ. ಮನು ಮೃತ ದುರ್ದೈವಿ. ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್ಮ್ಯಾನ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.
ಘಟನೆ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



