ತುಮಕೂರು: ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ವಾಹನವನ್ನು ಬಿಡುಗಡೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ಮೂಲದ ವಕೀಲರ ವಾಹನವನ್ನು ಬಿಡುಗಡೆ ಮಾಡಲು ಪಿಎಸ್ಐ ಚೇತನ್ ಕುಮಾರ್ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು.
ನಿನ್ನೆ ರಾತ್ರಿ ಸುಮಾರು 11:30ರ ವೇಳೆಗೆ ಕ್ಯಾತಸಂದ್ರ ಸಮೀಪದ ನಮಸ್ತೆ ತುಮಕೂರು ಹೋಟೆಲ್‌ನಲ್ಲಿ 40 ಸಾವಿರ ರೂ. ಲಂಚ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಚೇತನ್ ಕುಮಾರ್ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಪೊಲೀಸರು ಪಿಎಸ್ಐಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೊನ್ನೆಯಷ್ಟೆ ಚೀಟಿ ಅವ್ಯವಹಾರ ಪ್ರಕರಣದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬೆಂಗಳೂರಿನಲ್ಲಿ ಇನ್ಸ್ಪೆಕ್ಟರ್ ಒಬ್ಬರು ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸಿನಿಮೀಯ ರೀತಿಯಲ್ಲಿ ಲೋಕಾಯುಕ್ತ ತಂಡ ಟ್ರ್ಯಾಪ್ ನಡೆಸಿ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿತ್ತು.
ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು, 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 1 ಲಕ್ಷ ರೂ. ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದರು.



