ತಾಲೂಕಾ ಮಟ್ಟದ ಅಧಿಕಾರಿಗಳಲ್ಲಿ ತಳಮಳ!

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚಿನ ಕೆಲ ದಿನಗಳಲ್ಲಿ ಶಿರಹಟ್ಟಿ ಪಟ್ಟಣದ ತಹಸೀಲ್ದಾರ ಕಚೇರಿ, ಭೂ ದಾಖಲೆಗಳ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ಪಟ್ಟಣ ಪಂಚಾಯಿತಿ ಹಾಗೂ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಹೋಬಳಿ ಮಟ್ಟದ ಜನಸಂಪರ್ಕ ಸಭೆ, ವಸತಿ ಶಾಲೆಗಳಿಗೆ ಭೇಟಿ ಹೀಗೆ ಹತ್ತು ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೀಗ ಸೆ.10ಕ್ಕೆ ಶಿರಹಟ್ಟಿಯ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಮತ್ತೆ ಲೋಕಾಯುಕ್ತ ಜನಸಂಪರ್ಕ ಸಭೆ ನಡೆಯುತ್ತಿರುವುದು ತಾಲೂಕಾ ಮಟ್ಟದ ಅಧಿಕಾರಿಗಳಲ್ಲಿ ತಳಮಳ ಮೂಡಿಸುತ್ತಿದೆ.

Advertisement

ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ನೌಕರರು ನ್ಯಾಯಯುತವಾದ ಕೆಲಸ ಮಾಡಿಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದರೆ, ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ಮಾಡುತ್ತಿದ್ದರೆ, ಕೆಲಸ ಮಾಡಿಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲಿ ಮತ್ತು ಅಧಿಕಾರಿಗಳು ಅಕ್ರಮವಾಗಿ ಆಸ್ತಿಗಳನ್ನು ಹೊಂದಿದ್ದರೆ ಹಾಗೂ ಕಳಪೆ ಕಾಮಗಾರಿ, ಹಣ ದುರುಪಯೋಗದ ಪ್ರಕರಣಗಳು ಕಂಡುಬಂದಲ್ಲಿ ಲಿಖಿತ ರೂಪದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಜನಸಂಪರ್ಕ ಸಭೆಯಲ್ಲಿ ದೂರು ನೀಡಬಹುದಾಗಿದೆ.

ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಲಿಖಿತವಾಗಿ ದೂರು ಸಲ್ಲಿಸಬಹುದಾಗಿದ್ದು, ಈ ಸಂದರ್ಭದಲ್ಲಿ ದೂರುದಾರರಿಗೆ ಮತ್ತು ಸಾಕ್ಷಿದಾರರಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಇಂತಹ ಜನಸಂಪರ್ಕ ಸಭೆಗಳ ಸದುಪಯೋಗವನ್ನು ಪಡೆದುಕೊಂಡಾಗ ಸಭೆಗಳ ಉದ್ದೇಶ ಸಾರ್ಥಕವಾಗಲಿದೆ.

ಸೆ.10ರಂದು ಗದಗ ಲೋಕಾಯುಕ್ತ ಡಿಎಸ್‌ಪಿ ವಿಜಯಕುಮಾರ ಬಿರಾದಾರ ನೇತೃತ್ವದಲ್ಲಿ ನಡೆಯಲಿರುವ ಲೋಕಾಯುಕ್ತ ಜನಸಂಪರ್ಕ ಸಭೆಯ ಕುರಿತು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, ಸ್ಥಳೀಯವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಗದಗ ಲೋಕಾಯುಕ್ತ ತಂಡದ ವತಿಯಿಂದಲೂ ವಾಟ್ಸಾಪ್ ಗ್ರೂಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಭೆಯ ಮಾಹಿತಿ ನೀಡಲಾಗುತ್ತಿದೆ.

ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಗೂ ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಹೆಚ್ಚಾಗಿ ಮೌಖಿಕವಾಗಿ ದೂರುಗಳು ಕೇಳಿ ಬರುತ್ತಿದ್ದು, ಲಿಖಿತ ದೂರುಗಳು ಕಡಿಮೆ ಬರುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಭೇಟಿ ಸಮಯದಲ್ಲಿ ಅಧಿಕಾರಿಗಳ ಲೋಪದೋಷಗಳು ಕಂಡು ಬಂದಿರುವ ಬಗ್ಗೆ ಅವರ ಮೇಲಾಧಿಕಾರಿಗಳಿಗೆ ಈಗಾಗಲೇ ವರದಿ ಸಲ್ಲಿಸಿದ್ದು, ಅಂತವರಿಗೆ ಇಲಾಖೆಗಳ ವತಿಯಿಂದ ಈಗಾಗಲೇ ನೊಟೀಸ್ ಕೂಡಾ ಜಾರಿಯಾಗಿವೆ. ಸಾರ್ವಜನಿಕರು ಇಂತಹ ಸಭೆಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕೆಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗದಗ ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಬಿರಾದಾರ, ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ಅಲೆದಾಡಿಸುತ್ತಿದ್ದರೆ, ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ ಅಂತಹವರು ಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ. ದೂರುದಾರರಿಗೆ ಮತ್ತು ಸಾಕ್ಷಿದಾರರಿಗೆ ಸಂಪೂರ್ಣ ರಕ್ಷಣೆ ನೀಡಲಾಗುವುದು. ದೂರು ಸಲ್ಲಿಸಲು ಹಿಂಜರಿಯಬಾರದು, ಭಯಕ್ಕೆ ಒಳಗಾಗಬಾರದು. ಇಂತಹ ಸಭೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here