ವಿಜಯಪುರ: ತಾಯಿಯೊಬ್ಬಳು 4 ಮಕ್ಕಳನ್ನು ಕಾಲುವೆಗೆ ಎಸೆದು ತಾನೂ ಜೀವ ಬಿಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಿಗ್ ಟ್ವಿಸ್ ಸಿಕ್ಕಿದೆ. ಹೌದು ನಿನ್ನೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ದಾರುಣ ಘಟನೆ ನಡೆದಿತ್ತು.
5 ವರ್ಷದ ತನು ಲಿಂಗರಾಜ್ ಭಜಂತಿ, 3 ವರ್ಷದ ರಕ್ಷಾ ಲಿಂಗರಾಜ್ ಭಜಂತ್ರಿ ಹಾಗೂ 13 ತಿಂಗಳ ಅವಳಿ ಜವಳಿ ಹಸೇನ ಹಾಗೂ ಹುಸೇನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೊದಲಿಗೆ ಈ 4 ಮಕ್ಕಳ ತಾಯಿಯೇ ಕಾಲುವೆಗೆ ತಳ್ಳಿ ತಾನು ಜೀವ ಬಿಡಲು ಯತ್ನಿಸಿದ್ದಾಳೆ ಎನ್ನಲಾಗಿತ್ತು. ಆದರೆ ಇದಕ್ಕೆ ಕಾರಣ ಮಹಿಳೆಯ ಪತಿಯೇ ಎಂದು ತಿಳಿದು ಬಂದಿದೆ.
ಪತ್ನಿ ಭಾಗ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದ ಘಟನೆಯನ್ನು ಸಂಬಂಧಿಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಆಕೆಯ ಪತಿ ನಿಜ ಬಣ್ಣ ಬಯಲಾಗಿದೆ. ಮನೆಯಲ್ಲಿ ಸಾಯೋಣ ಅಂತ ಮೂರು ದಿನದ ಹಿಂದೆ ನನ್ನ ಪತಿ ಲಿಂಗರಾಜು ವಿಷ ತಂದು ಇಟ್ಟಿದ್ದ. ಮಕ್ಕಳಿಗೆ ವಿಷ ಕುಡಿಸಿದ್ದ.
ಮನೆಯಲ್ಲಿ ಸಂಪೂರ್ಣ ವಿಷ ತೆಗೆದುಕೊಂಡರೆ ಎಲ್ಲರಿಗೂ ಗೊತ್ತಾಗುತ್ತದೆ ಅಂತಾ ಹೊರಗಡೆ ಕರೆದುಕೊಂಡು ಬಂದ. ನಂತರ ಕಾಲುವೆ ಹತ್ತಿರ ಬಂದು ಮೊದಲು ಎರಡು ಮಕ್ಕಳನ್ನು ತಳ್ಳಿದ. ತದನಂತರ ಎರಡು ಮಕ್ಕಳು ಮತ್ತು ನನ್ನನ್ನು ಕಾಲುವೆಗೆ ದೂಡಿದ. ನನ್ನ ಗಂಡನನ್ನು ತುಂಬಾ ನಂಬಿದ್ದೆ. ದೇವರಿಗಿಂತ ಹೆಚ್ಚು ನಂಬಿದ್ದೆ.
ಆದರೆ, ಅವನು ನನಗೆ ಮೋಸ ಮಾಡಿಬಿಟ್ಟ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಭಯಾನಕ ಸತ್ಯ ಹೇಳುವ ಮೂಲಕ ಇಡೀ ದುರಂತಕ್ಕೆ ಕಾರಣವಾದ ಅಸಲಿ ಸತ್ಯವನ್ನು ಬಯಲಿಗೆ ತಂದಿದ್ದಾಳೆ ಭಾಗ್ಯಶ್ರೀ. ಈಕೆಯ ಹೇಳಿಕೆಯನ್ನ ಸಂಬಂಧಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಒಟ್ಟಾರೆಯಾಗಿ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.