ವಿಜಯಪುರ: ಪತ್ನಿಯನ್ನು ಕೊಂದು ಮನೆಯ ಆವರಣದಲ್ಲೇ ಹೂತು ಹಾಕಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೊಲೆ ಮಾಡಿದ ಬಳಿಕ ಪತ್ನಿ ನಾಪತ್ತೆಯಾಗಿರುವಂತೆ ನಾಟಕವಾಡಿ ಪೊಲೀಸರಿಗೆ ದೂರು ನೀಡಿದ್ದ ಪತಿ ಅರೆಸ್ಟ್ ಆಗಿದ್ದಾನೆ. ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ್ (45) ಎಂದು ಗುರುತಿಸಲಾಗಿದೆ.
ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ಹೆಚ್ಚಿನ ಸಾಲ ಮಾಡಿದ್ದ ಎನ್ನಲಾಗಿದ್ದು, ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜನವರಿ 23ರಂದು ರಾತ್ರಿ ಕೂಡ ಸಾಲದ ವಿಚಾರವಾಗಿ ಗಲಾಟೆ ನಡೆದಿದೆ. ಜನವರಿ 24ರಂದು ಪತ್ನಿಯ ತಲೆಗೆ ಹಾರಿಯಿಂದ ಹೊಡೆದು ಕೊಲೆ ಮಾಡಿದ ಪ್ರಭು, ಬಳಿಕ ಶವವನ್ನು ಮನೆಯ ಆವರಣದಲ್ಲಿ ಗಿಡ ನೆಡುವ ಜಾಗದಲ್ಲಿ ಹೂತು ಹಾಕಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಕೊಲೆ ಬಳಿಕ ಮಾರುಕಟ್ಟೆಗೆ ಹೋದ ನನ್ನ ಹೆಂಡತಿ ಮನೆಗೆ ಮರಳಿ ಬಂದಿಲ್ಲ ಎಂದು ಹೇಳಿ, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಜೊತೆಗೆ ಪತ್ನಿಯ ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟ ನಡೆಸುವ ನಾಟಕವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 24 ದಿನಗಳ ತನಿಖೆಯ ಬಳಿಕ ಆರೋಪಿಯ ನಾಟಕ ಬಯಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



