ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಹಸೀಲ್ದಾರ ಕಚೇರಿಯಲ್ಲಿ ದಂಡಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಕೆ ಅವರ ಮೇಲೆ ಆರೋಪಿಗಳಿಬ್ಬರು ಭಾನುವಾರ ತಡರಾತ್ರಿ ಕೊಲೆಗೆ ಯತ್ನಿಸಿದ್ದು, ಸಕಾಲದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಿಡಬ್ಲುಡಿ ಪ್ರವಾಸಿ ಮಂದಿರದ ಆವರಣದಲ್ಲಿರುವ ತಹಸೀಲ್ದಾರರ ಮನೆಗೆ ಭಾನುವಾರ ರಾತ್ರಿ ನುಗ್ಗಿದ ಆರೋಪಿಗಳು ತಹಸೀಲ್ದಾರ ನಾಗರಾಜ ಕೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೊಲೆಗೆ ಯತ್ನ ನಡೆಸಿದ್ದಾರೆ ಎಂದು ತಹಸೀಲ್ದಾರ ನಾಗರಾಜ ಕೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿ ಆರೋಪಿಗಳಾದ ಪಟ್ಟಣದ ಹನ್ಮಂತ ಚಲವಾದಿ ಹಾಗೂ ಶರಣಪ್ಪ ಗದಗಿನ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹನ್ಮಂತ ಚಲವಾದಿ ಮೇಲೆ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಆರೋಪಿ ಆಗಾಗ ತಹಸೀಲ್ದಾರ ಕಚೇರಿಗೆ ತೆರಳಿ ತನ್ನ ಮೇಲೆ ಇರುವ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದ ಎನ್ನಲಾಗಿದ್ದು, ಪ್ರಕರಣ ಖುಲಾಸೆಗೊಳಿಸದಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ತಹಸೀಲ್ದಾರ ನಾಗರಾಜರಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಆದರೆ ತಹಸೀಲ್ದಾರ ನಾಗರಾಜ ಕೆ ಯಾವುದಕ್ಕೂ ಜಗ್ಗದೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಇದನ್ನು ಸಹಿಸದ ಆರೋಪಿಗಳು ಭಾನುವಾರ ತಡರಾತ್ರಿ ಅವರ ನಿವಾಸಕ್ಕೆ ತೆರಳಿ ಕತ್ತು ಹಿಸುಕಿ ಅವರ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



