ನೆಲಮಂಗಲ: ನೀರಿನ ಸಂಪಿಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಮೃತ ಮಗುವನ್ನು ಬ್ಯಾಡರಹಳ್ಳಿಯ ಅಣ್ಣಯ್ಯ ಮತ್ತು ಋತು ದಂಪತಿಯ ಮಗ ಚಿರಾಗ್ ಎಂದು ಗುರುತಿಸಲಾಗಿದೆ.
ದಂಪತಿ ಸಂಬಂಧಿಕರ ಮದುವೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಕಾರ್ ತೊಳೆಯಲು ಅಣ್ಣಯ್ಯ ನೀರಿನ ಸಂಪಿನ ಮುಚ್ಚಳ ತೆರೆದು ಮನೆಯೊಳಗೆ ಹೋಗಿದ್ದರು. ಈ ಸಮಯದಲ್ಲಿ ಹೊರಗೆ ಆಟವಾಡುತ್ತಿದ್ದ ಚಿರಾಗ್ ಅಜಾಗರೂಕತೆಯಿಂದ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ.
ಮನೆಯಿಂದ ಹೊರಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



